ಬ್ರಹ್ಮಾವರ: ಜಿಲ್ಲೆಯಲ್ಲಿ ಕೃಷಿ ಕಾಲೇಜು ಆರಂಭಿಸುವ ಬಗ್ಗೆ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿ.ವಿ ಮೂಲಕ ಅಗತ್ಯ ಕ್ರಮ ಕೈಗೊಳ್ಳಬೇಕಿದ್ದು, ಕರಾವಳಿ ಪ್ರದೇಶದಲ್ಲಿ ಕೃಷಿ ಕಾಲೇಜು ಅತ್ಯಂತ ಅಗತ್ಯವಾಗಿದೆ. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಈಗಾಗಲೇ ಹೆಚ್ಚಿನ ಪ್ರಮಾಣದ ಅಗತ್ಯ ಮೂಲಭೂತ ಸೌಲಭ್ಯಗಳು, ವಿಜ್ಞಾನಿಗಳು, ಸಿಬ್ಬಂದಿಗಳು ಲಭ್ಯವಿದ್ದು ಶೀಘ್ರದಲ್ಲಿ ಕೃಷಿ ಕಾಲೇಜು ಆರಂಭಕ್ಕೆ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಅವರು ಶನಿವಾರ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ, ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿನ್, ಜಿಲ್ಲಾ ಕೃಷಿಕ ಸಮಾಜ, ಉಡುಪಿ ಮತ್ತು ದಕ್ಷಿಣ ಕನ್ನಡ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ, ಮುಖ್ಯಮಂತ್ರಿಗಳ ನೈಸರ್ಗಿಕ ಕೃಷಿ ಯೋಜನೆ, ವ.ಕೃ.ತೋ.ಸಂ.ಕೇಂದ್ರ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಡಿಪ್ಲೋಮಾ ಮಹಾವಿದ್ಯಾಲಯ ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ಕೃಷಿ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಕೃಷಿಯಲ್ಲಿ ಕೂಲಿ ಕಾರ್ಮಿಕರ ಕೊರತೆ, ಕೂಲಿಯ ಹೆಚ್ಚಳ, ಕಾಡುಪ್ರಾಣಿಗಳ ಹಾವಳಿಯಿಂದ ನಷ್ಟವಾಗುತ್ತಿದ್ದು, ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳು ಹಾಗೂ ನೂತನ ವಿಧಾನಗಳನ್ನು ಅಳವಡಿಸಕೊಳ್ಳುವ ಮೂಲಕ ಕೃಷಿಯನ್ನು ಉಳಿಸಲು ಸಾಧ್ಯವಿದ್ದು, ಕೃಷಿ ಭೂಮಿಯನ್ನು ಹಡಿಲು ಬಿಡದೆ ಅದನ್ನು ಪುನ:ಶ್ಚೇತನಗೊಳಿಸಬೇಕು. ಜಿಲ್ಲೆಯಲ್ಲಿ ಶೇ. 50 ಕ್ಕೂ ಹೆಚ್ಚು ಕೃಷಿ ಭೂಮಿಯನ್ನು ತೋಟಗಾರಿಕಾ ಭೂಮಿಯಾಗಿ ಪರಿವರ್ತಿಸಲಾಗಿದ್ದು ಪ್ರಸ್ತುತ ಇರುವ ಕೃಷಿ ಭೂಮಿಯಲ್ಲಿ ಯಾಂತ್ರೀಕರಣ ಮತ್ತು ಆಧುನಿಕತೆಯನ್ನು ಅಳವಡಿಸಿಕೊಂಡು ಕೃಷಿ ಮಾಡಬೇಕು. ಕಾಡುಪ್ರಾಣಿಗಳ ಹಾವಳಿ ತಡೆಗೆ ಕಾಡಿನಲ್ಲಿ ಈಗಾಗಲೇ 10000 ಕ್ಕೂ ಅಧಿಕ ಹಣ್ಣಿನ ಗಿಡಗಳನ್ನು ನೆಡಲಾಗಿದ್ದು, ಅಕೇಷಿಯಾ ಮರಗಳು ಇರುವ ಜಾಗದಲ್ಲಿಯೂ ಹಣ್ಣಿನ ಗಿಡಗಳನ್ನು ನೆಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದ ಕುಲಪತಿ ಡಾ.ಆರ್.ಸಿ.ಜಗದೀಶ್, ರೈತರಿಗೆ ಅನುಕೂಲವಾಗುವಂತೆ ಹೊಸ ಸಂಶೋಧನೆಗಳು, ಹೊಸ ತಂತ್ರಜ್ಞಾನ ಅಳವಡಿಕೆ, ಜೈವಿಕ ಗೊಬ್ಬರ, ಜೈವಿಕ ಕೀಟನಾಶಕಗಳ ಮೂಲಕ ಫಲವತ್ತತೆ ಹೆಚ್ಚಳ, ರೈತರೊಂದಿಗೆ ನಿರಂತರ ಸಂಪರ್ಕದ ಮೂಲಕ ಕೃಷಿ ವಿವಿಯು ರೈತರು ಮತ್ತು ಕೃಷಿಯ ಅಭಿವೃದ್ದಿಗೆ ಕಾರ್ಯನಿರ್ವಹಿಸುತ್ತಿದ್ದು, ಭತ್ತದ ಮತ್ತು ಗೇರಿನ ಹೊಸ ತಳಿಗಳನ್ನು ಪರಿಚಯಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಆರ್ ಪೂಜಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಉಪ ನಿರ್ದೇಶಕ ಚಂದ್ರಶೇಖರ ನಾಯಕ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಯ ಸಂಶೋಧನಾ ನಿರ್ದೇಶಕ ಡಾ.ಮೃತ್ಯಂಜಯ, ಸಹ ವಿಸ್ತರಣಾ ನಿರ್ದೇಶಕ ಡಾ.ಎಸ್.ಯು.ಪಾಟೀಲ್, ಬೆಂಗಳೂರು ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ವಿ.ವೆಂಕಟ ಸುಬ್ರಮಣಿಯನ್, ರಾಜ್ಯ ಉನ್ನತ ಸಾವಯವ ಕೃಷಿ ಸಮಿತಿ ಸದಸ್ಯ ರಾಘವೇಂದ್ರ ರಾವ್, ಉಡುಪಿ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ, ದ.ಕನ್ನಡ ಕೃಷಿಕ ಸಮಾಜದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಧನಂಜಯ, ಕೃಷಿ ಡಿಪ್ಲೋಮಾ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ವಿ.ಸುಧೀರ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಲಕ್ಷ್ಮಣ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಹೊಸ ಭತ್ತದ ತಳಿಗಳು ಮತ್ತು ಗೇರು ತಳಿಗಳ ಬಿಡುಗಡೆ, ಕೃಷಿ ಸಾಧಕರಿಗೆ ಸನ್ಮಾನ, ಜೈವಿಕ ಗೊಬ್ಬರಗಳ ಬಿಡುಗಡೆ,ಕೃಷಿ ಸಖಿಯರಿಗೆ ಪ್ರಮಾಣ ಪತ್ರ ವಿತರಣೆ, ತಾಂತ್ರಿಕ ಕೈಪಿಡಿ ಬಿಡುಗಡೆ, ಕೃಷಿ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ನಡೆಯಿತು. ವಿವಿಧ ಭತ್ತದ ಮತ್ತು ತೋಟಗಾರಿಕಾ ತಳಿಗಳು ಮತ್ತು ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.