ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಸಂಸ್ಥೆಗೆ ಮುಂದಿನ 5 ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿಯ 13 ಸ್ಥಾನಗಳ ಚುನಾವಣೆಯಲ್ಲಿ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಸಹಕಾರಿ ಬಳಗದ 6 ಮಂದಿ ಅವಿರೋಧವಾಗಿ ಸೇರಿ 8 ಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ.
ಮಂಗಳೂರು ತಾಲೂಕಿನ ಪ್ರಾ.ಕೃ. ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ನೀಲಯ ಎಂ. ಅಗರಿ, ಜಿಲ್ಲೆಯ ಮಾರಾಟ ಸಹಕಾರಿ ಸಂಘಗಳ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಹಕಾರಿ ಬ್ಯಾಂಕ್ಗಳ ಕ್ಷೇತ್ರದಿಂದ ಪ್ರಸಾದ್ ಕೌಶಲ್ ಶೆಟ್ಟಿ, ಹಾಲು ಉತ್ಪಾದಕರ ಸ. ಸಂಘಗಳ ಕ್ಷೇತ್ರದಿಂದ ಸುಧಾಕರ ಪಿ. ಶೆಟ್ಟಿ, ಬಂಟ್ವಾಳ ತಾ| ಪ್ರಾ. ಕೃಷಿ ಪತ್ತಿನ ಸ. ಸಂಘಗಳ ಕ್ಷೇತ್ರದಿಂದ ಪದ್ಮಶೇಖರ್ ಕುಮಾರ್, ಪುತ್ತೂರು ತಾ| ಪ್ರಾ. ಕೃಷಿ ಪತ್ತಿನ ಸ. ಸಂಘಗಳ ಕ್ಷೇತ್ರದಿಂದ ಎನ್. ರಾಜಶೇಖರ್ ಜೈನ್, ಮೂಡುಬಿದಿರೆ-ಮೂಲ್ಕಿ ಫಿರ್ಕಾ ಪ್ರಾ. ಕೃಷಿ ಪತ್ತಿನ ಸ. ಸಂಘಗಳ ಕ್ಷೇತ್ರದಿಂದ ಅಶ್ವಿನ್ ಜೋನ್ಸ್ ಪಿರೇರಾ ಆಯ್ಕೆಯಾದವರು.
ಮತದಾನದ ಮೂಲಕ ರಾಜೇಂದ್ರ ಕುಮಾರ್ ಸಹಕಾರ ಬಳಗದಿಂದ ಬೆಳ್ತಂಗಡಿ ತಾ| ಕೃಷಿ ಪತ್ತಿನ ಸ. ಸಂಘಗಳ ಕ್ಷೇತ್ರದಿಂದ ಸುಂದರ ಗೌಡ ಇಚ್ಚಿಲ, ಮಹಿಳಾ ಸ. ಸಂಘಗಳ ಕ್ಷೇತ್ರದಿಂದ ಅನುಪಮಾ ವಿ. ರಾವ್ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಎಲ್ಲರನ್ನೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅಭಿನಂದಿಸಿದ್ದಾರೆ.