ಉಡುಪಿ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ತಮ್ಮ ಜೀವವನ್ನೇ ಪಣಕ್ಕಿಟ್ಟು ಹಗಲಿರುಳು ಶ್ರಮಿಸುವ ಪೊಲೀಸರಿಗೆ, ದೇಶದ ಗಡಿಯ ರಕ್ಷಣೆಯಲ್ಲಿ ತೊಡಗಿರುವ ಸೈನಿಕರಿಗೆ ನೀಡುವಷ್ಟು ಗೌರವ ಮತ್ತು ಸೌಲಭ್ಯಗಳನ್ನು ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದರು.
ಅವರು ಇಂದು ಉಡುಪಿ ಜಿಲ್ಲಾ ಪೋಲೀಸ್ ವತಿಯಿಂದ, ಚಂದು ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ, ಪೊಲೀಸ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಪೊಲೀಸರು ದೇಶದೊಳಗೆ ಅಡಗಿರುವ ದ್ರೋಹಿಗಳನ್ನು ಪತ್ತೆ ಹಚ್ಚಿ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅವಿರತವಾಗಿ ಶ್ರಮಿಸುತ್ತಿದ್ದು, ಇವರಿಗೆ ಆಧುನಿಕ ಶಸ್ತಾಸ್ತçಗಳನ್ನು ನೀಡುವ ಮೂಲಕ ಸಶಕ್ತಗೊಳಿಸಿ, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧಗೊಳಿಸಬೇಕು. ಇವರ ಸೇವೆ, ತ್ಯಾಗ, ಬಲಿದಾನಕ್ಕೆ ಸೈನಿಕರಿಗೆ ನೀಡಿದಷ್ಟು ಗೌರವ ನೀಡಬೇಕು. ಕಾನೂನು ಪಾಲನೆ ಕುರಿತು ಸಾರ್ವಜನಿಕರಿಗೂ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಎಂತಹ ಕ್ಲಿಷ್ಟಕರ ಸಮಯದಲ್ಲೂ ಸಹ ಪೊಲೀಸರು ಎದೆಗುಂದದೇ ಕರ್ತವ್ಯ ನಿರ್ವಹಿಸುತ್ತಿದ್ದು, ಕೋವಿಡ್-19 ಮತ್ತು ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಇವರ ಸೇವೆ ಶ್ಲಾಘನೀಯವಾಗಿದೆ. ಜಿಲ್ಲೆಯಲ್ಲಿ ಪೊಲೀಸರು ಮಾದಕ ವಸ್ತುಗಳ ನಿಯಂತ್ರಣ ಕಾರ್ಯಾಚರಣೆಯಲ್ಲಿ ಕೇವಲ 1 ತಿಂಗಳಲ್ಲಿ 100 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ಇತರೆ ಜಿಲ್ಲೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ, ಪೊಲೀಸ್ ಹುತಾತ್ಮರ ದಿನಾಚರಣೆಯ ಮಹತ್ವ ಹಾಗೂ ಪೊಲೀಸರ ತ್ಯಾಗ ಬಲಿದಾನ ಕುರಿತು ಮಾತನಾಡಿ, ಸೆಪ್ಟಂಬರ್ 2021 ರಿಂದ ಆಗಸ್ಟ್ 2022 ರ ವರೆಗೆ ಕರ್ತವ್ಯದ ಅವಧಿಯಲ್ಲಿ ಹುತಾತ್ಮರಾದ ರಾಜ್ಯದ 11 ಸೇರಿದಂತೆ ದೇಶದ ಒಟ್ಟು 261 ಪೊಲೀಸರ ಹೆಸರುಗಳನ್ನು ಸ್ಮರಣೆ ಮಾಡಿದರು.
ಹುತಾತ್ಮ ಪೊಲೀಸರ ಗೌರವಾರ್ಥ ಗಾಳಿಯಲ್ಲಿ 3 ಸುತ್ತು ಕುಶಲ ತೋಪು ಹಾರಿಸಲಾಯಿತು. ಎರಡು ನಿಮಿಷಗಳ ಮೌನಾಚರಣೆ ನಡೆಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ಹೆಚ್, ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಷ್ ರೆಡ್ಡಿ, ಕಾರ್ಕಳ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ, ಉಪಸ್ಥಿತರಿದ್ದರು.
ಸೆನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ನಿರೂಪಿಸಿ, ವಂದಿಸಿದರು.