ಉಡುಪಿ, ಮೇ 27: ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ರಂಗ ಶಿಕ್ಷಣ ಡಿಪ್ಲೋಮಾ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಶಿಕ್ಷಣದ ಅವಧಿ ಒಂದು ವರ್ಷ. ಕನಿಷ್ಟ ವಿದ್ಯಾರ್ಹತೆ ಎಸ್ಎಸ್ಎಲ್ಸಿ ಆಗಿದ್ದು ಪದವಿಧರರಿಗೆ ಆಧ್ಯತೆ ನೀಡಲಾಗುವುದು. ತರಬೇತಿ ಅವಧಿಯಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುತ್ತದೆ. ಕರ್ನಾಟಕ ಹಾಗೂ ಭಾರತದ ರಂಗತಜ್ಞರು ಮತ್ತು ಅತಿಥಿ ಉಪನ್ಯಾಸಕರಿಂದ ತರಗತಿಗಳು ನಡೆಯುತ್ತದೆ.
ಒಂದು ವರ್ಷದಲ್ಲಿ ಭಾರತೀಯ ರಂಗಭೂಮಿ, ಕನ್ನಡ ರಂಗಭೂಮಿ ಮತ್ತು ಸಾಹಿತ್ಯ ಪರಂಪರೆ, ಪಾಶ್ಚಾತ್ಯ ರಂಗಭೂಮಿ, ಅಭಿನಯ, ಆಹಾರ್ಯ, ಶಿಕ್ಷಣದಲ್ಲಿ ರಂಗಭೂಮಿ ಕುರಿತಾದ ಸೈಧಾಂತಿಕ ಮತ್ತು ಪ್ರಾಯೋಗಿಕ ತರಗತಿಗಳು ನಡೆಯುತ್ತವೆ. ಕಳರಿ, ಯೋಗ, ಕಥಕ್ಕಳಿ, ಯಕ್ಷಗಾನ, ಕಂಸಾಳೆ, ಹೆಜ್ಜೆಮೇಳ, ವೀರಗಾಸೆ, ಪ್ರಸಾಧನ, ಬೆಳಕಿನ ವಿನ್ಯಾಸ, ರಂಗ ವಿನ್ಯಾಸ, ವಸ್ತ್ರ ವಿನ್ಯಾಸ ಮುಂತಾದ ಕಾರ್ಯಾಗಾರಗಳ ಜೊತೆಗೆ ಕಾವ್ಯ, ಸಿನೇಮಾ, ಚಿತ್ರಕಲೆ ಕುರಿತಾದ ಕಮ್ಮಟಗಳು ನಡೆಯುತ್ತವೆ. ಒಂದು ವರ್ಷದಲ್ಲಿ ನಾಲ್ಕರಿಂದ ಐದು ನಾಟಕಗಳ ಅಭ್ಯಾಸ ಹಾಗೂ ಪ್ರದರ್ಶನ ನಡೆಯುತ್ತದೆ.
ಆಸಕ್ತರು ಪ್ರಾಚಾರ್ಯರು, ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ, ಸಾಣೆಹಳ್ಳಿ, ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ ಈ ವಿಳಾಸಕ್ಕೆ ಬರೆದು ಪ್ರವೇಶ ಅರ್ಜಿಗಳನ್ನು ತರಿಸಿಕೊಳ್ಳಬಹುದು ಅಥವಾ ರಂಗ ಶಾಲೆಯ ವೆಬ್ಸೈಟ್ www.theatreschoolsanehalli.org ನಲ್ಲಿ ಪ್ರವೇಶ ಅರ್ಜಿಯನ್ನು ಡೌನ್ಲೋಡ್ ಮಾಡಿ, ಜೂನ್ ತಿಂಗಳೊಳಗಾಗಿ ಅರ್ಜಿಯನ್ನು ರಂಗಶಾಲೆಗೆ ಸಲ್ಲಿಸುವುದು. ಜುಲೈ ತಿಂಗಳಲ್ಲಿ ನಡೆಯುವ ಸಂದರ್ಶನದ ದಿನಾಂಕವನ್ನು ಅಭ್ಯರ್ಥಿಗೆ ದೂರವಾಣಿ ಮೂಲಕ ತಿಳಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಜುಲೈ 15 ರಿಂದ ತರಗತಿಗಳು ಪ್ರಾರಂಭವಾಗುತ್ತವೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 08199-243772, 9448398144, 9743095604 ಅನ್ನು ಸಂಪರ್ಕಿಸುವಂತೆ ರಂಗಶಾಲೆಯ ಪ್ರಕಟಣೆ ತಿಳಿಸಿದೆ.