ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ: 24 ವರ್ಷಗಳ ಬಳಿಕ ಗಾಂಧಿಯೇತರ ಅಧ್ಯಕ್ಷ

ನವದೆಹಲಿ: ಕರ್ನಾಟಕದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ತಮ್ಮ ಪ್ರತಿಸ್ಪರ್ಧಿ ಶಶಿ ತರೂರ್ ಅವರನ್ನು ಸೋಲಿಸಿ 24 ವರ್ಷಗಳ ಬಳಿಕ ಮೊದಲ ಗಾಂಧಿಯೇತರ ಮತ್ತು ನಾಲ್ಕು ದಶಕಗಳ ಬಳಿಕ ಮೊದಲ ಪರಿಶಿಷ್ಟ ಜಾತಿಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

1988 ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಣಯದ ಮೂಲಕ ಸೋನಿಯಾ ಗಾಂಧಿ ಅವರನ್ನು ಪಕ್ಷದ ಮುಖ್ಯಸ್ಥರಾಗಲು ಆಹ್ವಾನಿಸಿ, ಸೀತಾರಾಮ್ ಕೇಸರಿ ಅವರನ್ನು ಅನೌಪಚಾರಿಕವಾಗಿ ಪದಚ್ಯುತಗೊಳಿಸಿದ ನಂತರ 24 ವರ್ಷಗಳಲ್ಲಿ ಕಾಂಗ್ರೆಸ್ ಅನ್ನು ಮುನ್ನಡೆಸುವ ಮೊದಲ ಗಾಂಧಿಯೇತರ ವ್ಯಕ್ತಿಯಾಗಿ ಖರ್ಗೆ ಹೊರಹೊಮ್ಮಿದ್ದಾರೆ.

ಚಲಾವಣೆಯಾದ 9385 ಮತಗಳಲ್ಲಿ ಖರ್ಗೆ 7897 ಮತಗಳನ್ನು ಪಡೆದರೆ, ತರೂರ್ ಕೇವಲ 1072 ಮತಗಳನ್ನು ಗಳಿಸಿದ್ದಾರೆ. ಒಟ್ಟು 416 ಮತಗಳು ಅಸಿಂಧುವಾಗಿವೆ ಎಂದು ಮೂಲಗಳು ತಿಳಿಸಿವೆ.

ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ 80 ವರ್ಷದ ಖರ್ಗೆ, ಒಂಬತ್ತು ಬಾರಿ ಶಾಸಕ ಮತ್ತು ಮೂರು ಬಾರಿ ಸಂಸದರಾಗಿ ಗೆಲುವು ದಾಖಲಿಸಿದ್ದಾರೆ. ಈಗ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲೂ ಗೆಲುವು ಸಾಧಿಸಿ ಸೋಲಿಲ್ಲದ ಸರದಾರ ಪಟ್ಟವನ್ನು ಉಳಿಸಿಕೊಂಡಿದ್ದಾರೆ. ಕಾಂಗ್ರೆಸ್ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಫಲಿಂತಾಶವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ವಿನಮ್ರತೆಯಿಂದ ಸೋಲನ್ನು ಒಪ್ಪಿಕೊಂಡಿರುವ ತರೂರ್, ಪಕ್ಷವನ್ನು ಮುನ್ನಡೆಸಲು ಹೊಸ ಅಧ್ಯಕ್ಷರೊಂದಿಗೆ ಕೆಲಸ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ.

22 ವರ್ಷಗಳ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಮೊದಲ ಚುನಾವಣೆಯಾಗಿದೆ ಮತ್ತು ಪಕ್ಷದ 137 ವರ್ಷಗಳ ಇತಿಹಾಸದಲ್ಲಿ ನಡೆದ ಐದನೇ ಪ್ರಮುಖ ಸ್ಪರ್ಧೆಯಾಗಿದೆ.