ಉಡುಪಿ: ವಿಶ್ವದ ಅತಿದೊಡ್ಡ ವಿಮಾನ ಎ380 ಅನ್ನು ಯಶಸ್ವಿಯಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಿದ ಸಂದೀಪ್ ಪ್ರಭು ಉಡುಪಿ ಜಿಲ್ಲೆಯವರು. ಉಡುಪಿಯ ಅಲೆವೂರು ಮೂಲದ ಶ್ರೀಮತಿ ಆರತಿ ಪ್ರಭು ಮತ್ತು ಶಿವರಾಯ ಪ್ರಭು ದಂಪತಿಗಳಿಗೆ ಜನಿಸಿದ ಸಂದೀಪ್ ಅವರು ಸುಮಾರು 15 ವರ್ಷಗಳಿಂದ ಪೈಲಟ್ ಆಗಿದ್ದಾರೆ.
ಏರ್‌ಬಸ್ ಎ380 ಒಂದು ಬೃಹತ್ ಗಾತ್ರದ ವಿಮಾನವಾಗಿದ್ದು,ಇದನ್ನು ಏರ್‌ಬಸ್ ಅಭಿವೃದ್ಧಿಪಡಿಸಿ ಉತ್ಪಾದಿಸಿದೆ. ಇದು ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನವಾಗಿದೆ ಮತ್ತು ಅತ್ಯಂತ ಉದ್ದದ ಡಬಲ್ ಡೆಕ್ ಜೆಟ್ ವಿಮಾನವಾಗಿದೆ. ಪೂರ್ಣ-ಉದ್ದದ ಡಬಲ್-ಡೆಕ್ ವಿಮಾನವು 525 ಪ್ರಯಾಣಿಕರಿಗೆ ವಿಶಿಷ್ಟವಾದ ಆಸನವನ್ನು ಹೊಂದಿದ್ದು, 853 ಪ್ರಯಾಣಿಕ ಗರಿಷ್ಠ ಪ್ರಮಾಣೀಕೃತ ಸಾಮರ್ಥ್ಯವನ್ನು ಹೊಂದಿದೆ.
ಸುಪರ್ ಜಂಬೋ ಎನ್ನುವ ಅಡ್ಡ ಹೆಸರಿನಿಂದ ಕರೆಯಲಾಗುವ ದುಬೈ ನ ಎಮಿರೆಟ್ಸ್ ಏರ್ ಲೈನ್ಸ್ ಗೆ ಸೇರಿದ ಈ ಜಂಬೋ ಜೆಟ್ ಅನ್ನು ಕನ್ನಡಿಗ ಸಂದೀಪ್ ಪ್ರಭು ಅ.14 ರಂದು ದುಬೈನಿಂದ ಹಾರಿಸಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಇಳಿಸಿದ್ದಾರೆ ಮಾತ್ರವಲ್ಲ ಪೈಲಟ್ ಅನೌನ್ಸ್ ಮೆಂಟ್ ಅನ್ನು ಕೂಡಾ ಕನ್ನಡದಲ್ಲೇ ಮಾಡಿದ್ದಾರೆ ಎಂದು ಅವರ ಸಹೋದರ ಸತ್ಯೇಂದ್ರ ಪ್ರಭು ಟ್ವೀಟಿಸಿದ್ದಾರೆ.