ಸುಳ್ಯ: ಇಲ್ಲಿನ ನಾಲ್ಕೂರು ಗ್ರಾಮದ ಇಜಿನಡ್ಕದಲ್ಲೊಂದು ವಿಚಿತ್ರ ಘಟನೆ ಅ. 15 ರಂದು ವರದಿಯಾಗಿದೆ. ಗ್ರಾಮಸ್ಥರೊಬ್ಬರು ಮನೆಯ ಪೂಜಾ ಸಾಮಾಗ್ರಿಗಳನ್ನು ನದಿಗೆಸೆದಿದ್ದು, ಇದನ್ನು ಕಾಳಿಂಗ ಸರ್ಪವೊಂದು ಕಾವಲು ಕಾಯುತ್ತಿತ್ತು.
ಪೂಜಾ ಸಾಮಾಗ್ರಿಗಳಲ್ಲಿ ಕಾಲುದೀಪ, ಆರತಿ, ಘಂಟೆ, ಹರಿವಾಣ ಮುಂತಾದ ಹಳೆಯ ಪೂಜಾ ಸಾಮಾಗ್ರಿಗಳನ್ನು ಇಜಿನಡ್ಕ ಎಂಬಲ್ಲಿ ನದಿಗೆ ಎಸೆದಿರುವುದನ್ನು ಸ್ಥಳೀಯರು ಗಮನಿಸಿದ್ದರು. ಇದೇ ವೇಳೆ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಅಲ್ಲೇ ಕಾವಲು ಕಾಯುತ್ತಿರುವ ರೀತಿಯಲ್ಲಿ ಇರುವುದನ್ನು ಕೂಡಾ ನೋಡಿದ್ದರು.
ಸುದ್ದಿ ತಿಳಿದು ಹಲವಾರು ಜನರು ಸ್ಥಳಕ್ಕಾಗಮಿಸಿದ್ದರೂ, ಪೂಜಾ ಸಾಮಾಗ್ರಿಗಳನ್ನು ನದಿಗೆಸದವರ ಬಗ್ಗೆ ಪತ್ತೆ ಇರಲಿಲ್ಲ. ಸ್ಥಳದ ಸನಿಹದಲ್ಲೇ ಇದ್ದ ಚಾರ್ಮತ ನಾಗನ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆಸಿ ಸಾಮಾಗ್ರಿಗಳ ಮಾಲಕರ ಪತ್ತೆಗೆ ನಾಗನ ಮೊರೆ ಹೋಗಿದ್ದರು ಸ್ಥಳೀಯರು.
ಅದರಂತೆ ಸುದ್ದಿ ತಿಳಿದ ಪೂಜಾ ಸಾಮಾಗ್ರಿಗಳ ಮಾಲಕ ರಾಮಣ್ಣನಾಯ್ಕ ಎಂಬುವರು ಸ್ಥಳಕ್ಕಾಗಮಿಸಿ, ತಮ್ಮ ಅಣ್ಣನ ಮನೆಯಲ್ಲಿ ದೇವರ ಪೂಜೆಗೆ ಬಳಸುತ್ತಿದ್ದ ಪರಿಕರಗಳಿಗೆ ವಾರೀಸುದಾರರಿಲ್ಲದ ಕಾರಣ ಪ್ರಶ್ನಾಚಿಂತನೆಯಂತೆ ನದಿಗೆ ಎಸೆದಿರುವುದಾಗಿ ಹೇಳಿದ್ದಾರೆ. ಬಳಿಕ ಪೂಜಾ ಸಾಮಾಗ್ರಿಗಳನ್ನು ಮರಳಿ ತಮ್ಮ ಮನೆಗೊಯ್ದಿದ್ದಾರೆ. ಆ ಬಳಿಕ ಕಾಳಿಂಗ ಸರ್ಪವೂ ಅಲ್ಲಿಂದ ತೆರಳಿದೆ ಎನ್ನಲಾಗಿದೆ.












