ಬಗೆಹರಿದ ತುಳು ಚಿತ್ರ ಬಿಡುಗಡೆ ಗೊಂದಲ: ಡಿ. 16ಕ್ಕೆ ಶಕಲಕ ಬೂಮ್ ಬೂಮ್, ಜನವರಿ 13 ಕ್ಕೆ ಇಲ್ಲ್ ಒಕ್ಕೆಲ್ ತೆರೆಗೆ

ಮಂಗಳೂರು: ತುಳು ಚಲನಚಿತ್ರಗಳಾದ ಶಕಲಕ ಬೂಮ್ ಬೂಮ್ ಹಾಗೂ ಇಲ್ಲ್ ಒಕ್ಕೆಲ್ ಬಿಡುಗಡೆ ದಿನಾಂಕದ ಬಗ್ಗೆ ಇದ್ದ ಗೊಂದಲ ಬಗೆಹರಿದಿದ್ದು, ಶಕಲಕ ಬೂಮ್ ಬೂಮ್ ಡಿ. 16 ರಂದು, ಇಲ್ಲ್ ಒಕ್ಕೆಲ್ ಜ. 13ಕ್ಕೆ ತೆರೆಗೆ ಬರಲಿದೆ.

ಈ ಬಗ್ಗೆ ಎರಡೂ ಚಿತ್ರತಂಡಗಳು ಮಾತುಕತೆ ನಡೆಸಿದ್ದು, ಗುರುವಾರ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದ ಪ್ರಮುಖರು ಮಾಹಿತಿ ನೀಡಿದರು. ಡಾ. ಸುರೇಶ್ ಚಿತ್ರಾಪು ನಿರ್ದೇಶನದ ‘ಇಲ್ಲ್ ಒಕ್ಕೆಲ್’ತುಳು ಸಿನಿಮಾ ಅ. 21ಕ್ಕೆ ಬಿಡುಗಡೆಗೆ ದಿನ ನಿಗದಿಯಾಗಿದ್ದರೂ, ಟಾಕೀಸ್ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಡಿ. 16ಕ್ಕೆ ಬಿಡುಗಡೆ ಮಾಡಲು ಯೋಚಿಸಲಾಗಿತ್ತು. ಆದರೆ, ಅದೇ ದಿನ ‘ಶಕಲಕ ಬೂಮ್ ಬೂಮ್’ ಸಿನಿಮಾ ಬಿಡುಗಡೆಗೆ ತಯಾರಿ ನಡೆಸಲಾಗಿತ್ತು. ಹೀಗಾಗಿ ಎರಡೂ ಸಿನಿಮಾ ತಂಡದ ಮಧ್ಯೆ ಗೊಂದಲ ಉಂಟಾಗಿತ್ತು.

ವಿವಾದ ವಿಕೋಪಕ್ಕೆ ತೆರಳುವ ಸಂದರ್ಭದಲ್ಲಿ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಸಹಿತ ಹಿರಿಯರ ಉಪಸ್ಥಿತಿಯಲ್ಲಿ ಸಭೆ ನಡೆಸಿ ಇಲ್ಲ್ ಒಕ್ಕೆಲ್ ಜ. 13 ಹಾಗೂ ಶಕಲಕ ಬೂಮ್ ಬೂಮ್ ಡಿ. 16ಕ್ಕೆ ತೆರೆಗೆ ಬರುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಎರಡೂ ಚಿತ್ರ ತಂಡದ ಪ್ರಮುಖರು ತಿಳಿಸಿದ್ದಾರೆ.

‘ಇಲ್ಲ್ ಒಕ್ಕೆಲ್’ ಸಿನಿಮಾದ ನಿರ್ಮಾಪಕ ವಾಸುದೇವ್ ಎಸ್. ಚಿತ್ರಾಪು ಮಾತನಾಡಿ, ಸಿನಿಮಾ ಸಿದ್ದವಾಗಿ ವರ್ಷಗಳೇ ಕಳೆದಿವೆ. ಸೆನ್ಸಾರ್ ಕೂಡ ಆಗಿದೆ. ಆದರೆ, ನಾವು ಸಿನಿಮಾ ಬಿಡುಗಡೆ ಮಾಡುವ ಸಮಯದಲ್ಲಿ ಇತರ ಸಿನಿಮಾ ಬಿಡುಗಡೆ ಆಗುವ ಕಾರಣದಿಂದ ನಮಗೆ ಸಮಸ್ಯೆ ಆಯಿತು. ಈ ಬಾರಿಯೂ ಅಂತಹ ಸಂಧಿಗ್ಧತೆ ಇತ್ತು. ಆದರೆ, ತುಳು ಸಿನಿಮಾಗಳಿಗೆ ಸಮಸ್ಯೆ ಆಗಬಾರದು ಎಂಬ ಕಾರಣದಿಂದ ಹಿರಿಯರ ಮಾತುಕತೆ ಹಿನ್ನೆಲೆಯಲ್ಲಿ ಇಲ್ಲ್ ಒಕ್ಕೆಲ್ ಜ. 13ಕ್ಕೆ ತೆರೆ ಕಾಣಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.

ಶಕಲಕ ಬೂಮ್ ಬೂಮ್ ಚಿತ್ರದ ನಿರ್ಮಾಪಕ ನಿತ್ಯಾನಂದ ನಾಯಕ್ ಮಾತನಾಡಿ, ಡಿ. 16ಕ್ಕೆ ಶಕಲಕ ಬೂಮ್ ಬೂಮ್ ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ಈ ಹಿಂದೆಯೇ ತೀರ್ಮಾನಿಸಲಾಗಿತ್ತು. ಆದರೆ, ಆ ವೇಳೆಗೆ ಇಲ್ಲ್ ಒಕ್ಕೆಲ್ ಬಿಡುಗಡೆ ಬಗ್ಗೆ ಘೋಷಣೆಯಾಗಿತ್ತು. ಹೀಗಾಗಿ ಗೊಂದಲ ಉಂಟಾಗಿತ್ತು. ಬಳಿಕ ಹಿರಿಯರ ಮಾರ್ಗದರ್ಶನದಿಂದ ಸಮಸ್ಯೆ ಬಗೆಹರಿಸಿದ್ದೀವೆ ಎಂದರು.

ಪ್ರಮುಖರಾದ ವಿಸ್ಮಯ ವಿನಾಯಕ್, ಯೋಗೀಶ್ ಕೋಟ್ಯಾನ್, ಸುನಿಲ್ ಉಪಸ್ಥಿತರಿದ್ದರು.