ಶಾಸಕ ಹರೀಶ್ ಪೂಂಜಾ ಮೇಲೆ ದಾಳಿ ಯತ್ನ: ಬಿಜೆಪಿ ಯುವ ಮೋರ್ಚಾ, ಹಿಂದೂ ಸಂಘಟನೆಗಳಿಂದ ಖಂಡನೆ

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ಅವರ ಮೇಲೆ ದುಷ್ಕರ್ಮಿಗಳ ತಂಡವೊಂದು ದಾಳಿಗೆ ಯತ್ನ ನಡೆಸಿದ ಘಟನೆ ಶುಕ್ರವಾರ ಅ.13ರಂದು ರಾತ್ರಿ 11.15 ರ ಸುಮಾರಿಗೆ ನಡೆದಿದೆ.

ಹರೀಶ್ ಪೂಂಜಾ ಅವರು ಮಂಗಳೂರು ವಿಮಾನ ನಿಲ್ದಾಣದಿಂದ ಬೆಳ್ತಂಗಡಿಗೆ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಫರಂಗಿಪೇಟೆ ಬಳಿ ಸ್ಕಾರ್ಪಿಯೋ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಶಾಸಕರಿದ್ದ ಕಾರನ್ನು ಅಡ್ಡಗಟ್ಟಿ ದಾಳಿಗೆ ಯತ್ನಿಸಿದೆ. ಆದರೆ ಅದೃಷ್ಟವಶಾತ್ ಶಾಸಕರು ಈ ಕಾರಿನಲ್ಲಿರದೆ, ತಮ್ಮ ಸಂಬಂಧಿಯೊಬ್ಬರ ಕಾರಿನಲ್ಲಿ ಮುಂದಿನಿಂದ ಪ್ರಯಾಣಿಸುತ್ತಿದ್ದರು. ಶಾಸಕರ ಕಾರು ಹಿಂದಿನಿಂದ ಪ್ರಯಾಣಿಸುತ್ತಿತ್ತು.

ಈ ಬಗ್ಗೆ ಮಾಹಿತಿ ಇಲ್ಲದ ದುಷ್ಕರ್ಮಿಗಳು ಶಾಸಕರು ಪ್ರಯಾಣಿಸುವ ಅಧಿಕೃತ ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು, ತಲವಾರು ಝಳಪಿಸಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಶಾಸಕ ಹರೀಶ್ ಪೂಂಜಾ ಕಾರು ಚಾಲಕ ನವೀನ್ ದೂರು ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕರ ಕಾರನ್ನು ಅಡ್ಡಗಟ್ಟಿ ಜೀವಬೆದರಿಕೆ ಒಡ್ಡಿರುವುದನ್ನು ಹಿಂದೂ ಜಾಗರಣ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹಸಂಯೋಜಕ ಸಮಿತ್‌ರಾಜ್ ದರೆಗುಡ್ಡೆ ಮತ್ತು ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡ್ ಖಂಡಿಸಿದ್ದು, ದುಷ್ಕರ್ಮಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದ್ದಾರೆ.