ಕುಂದಾಪುರ: ಕನ್ನಡ ಚಿತ್ರರಂಗದ ಹೆಸರಾಂತ ನಟ ರಮೇಶ್ ಅರವಿಂದ್ ಉಡುಪಿ ಜಿಲ್ಲೆಯಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ಆಚಾರ ವಿಚಾರ ಸಂಸ್ಕೃತಿಗಳನ್ನು ಆಸ್ವಾದಿಸಿ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ತನ್ನ ಯಕ್ಷಗಾನದ ವೇಷಭೂಷಣಗಳನ್ನು ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಹಂಚಿಕೊಂಡಿರುವ ನಟ ರಮೇಶ್ ಅರವಿಂದ್,
“ಪ್ರಶ್ನೆ-ಕಳೆದ ಬಾರಿ ನೀವು ಮೊದಲ ಬಾರಿಗೆ ಯಾವಾಗ ಏನನ್ನಾದರೂ ಮಾಡಿದ್ದೀರಿ?
ಉತ್ತರ-ನಿನ್ನೆ. ಮೊದಲ ಬಾರಿಗೆ ಯಕ್ಷಗಾನದ ಪ್ರಸಾಧನವನ್ನು ಪ್ರಯತ್ನಿಸಿದೆ. ಈ ಶ್ರೇಷ್ಠ ಕಲಾ ಪ್ರಕಾರದೊಂದಿಗೆ ಸಂಬಂಧ ಹೊಂದಿರುವ ಎಲ್ಲರ ಬಗ್ಗೆಯೂ ಇರುವ ನನ್ನ ಗೌರವವನ್ನಿದು ನವೀಕರಿಸಿದೆ” ಎಂದು ಬರೆದುಕೊಂಡಿದ್ದಾರೆ.
ಯಕ್ಷಗಾನದ ಮೇಕಪ್ ಅನ್ನು ಶೈಲೇಶ್ ತೀರ್ಥಹಳ್ಳಿ ಮತ್ತು ರಂಗನಾಥ ಶೆಟ್ಟಿಗಾರ್ ಮಾಡಿದ್ದು, ಫೋಟೋಶೂಟ್ ಅನ್ನು ಫೋಕಸ್ ರಾಘವೇಂದ್ರ ಅವರು ನಡೆಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಂ ನಲ್ಲಿ ಮಾಹಿತಿ ಹಂಚಿಕೊಂಡಿರುವ ರಾಘು,
ಇತ್ತೀಚೆಗೆ ಉಡುಪಿಯ ಕಾರ್ಯಕ್ರಮ ಒಂದಕ್ಕೆ ಅತಿಥಿಯಾಗಿ ಆಗಮಿಸಿದ್ದ ಜಗ ಮೆಚ್ಚಿದ ನಟ, ಸಂವೇದನಾಶೀಲ ನಿರ್ದೇಶಕ, ಸೃಜನಶೀಲ ಬರಹಗಾರ, ಸ್ಫೂರ್ತಿ ತುಂಬುವ ಭಾಷಣಕಾರ, ಸಾಧಕ, ನಿರೂಪಕ, ಬಹುಮುಖ ಪ್ರತಿಭೆಯ ರಮೇಶ್ ಅರವಿಂದ್ ಉಡುಪಿಯ ಖ್ಯಾತ ಮನೋವೈದ್ಯ ಡಾ. ವಿರೂಪಾಕ್ಷ ದೇವರು ಮನೆಯವರೊಂದಿಗೆ ನನ್ನ ‘ಕುದ್ರು ನೆಸ್ಟ್’ ಹೋಮ್ ಸ್ಟೇಗೆ ಭೇಟಿ ನೀಡಿದ್ದರು.
ಪರಿಸರ, ನದಿ, ಮನೆ, ಕ್ರಿಯಾಶೀಲ ವಿನ್ಯಾಸವನ್ನು ಕಂಡು ಮೆಚ್ಚುಗೆ ಸೂಚಿಸಿದ್ದ ಅವರು ನನ್ನ ಛಾಯಾಚಿತ್ರಗಳನ್ನು ಕಂಡು ಬೆರಗು ವ್ಯಕ್ತಪಡಿಸಿ ತನಗೂ ಫೋಟೋ ಶೂಟ್ ಮಾಡ್ತೀರಾ ಎಂದು ಕೇಳಿದಾಗ ಆದ ಆನಂದಕ್ಕೆ ಅಂತ್ಯವೇ ಇರಲಿಲ್ಲ. “ನಾನೊಂದು ದಿನ ಬಂದು ಇಲ್ಲಿರುತ್ತೇನೆ. ಕಾನ್ಸೆಪ್ಟ್ ಎಲ್ಲವೂ ನಿಮ್ಮದೇ” ಎಂದು ಹೇಳಿದವರು ವಾರ ಕಳೆಯುವುದರಲ್ಲೇ ಬಂದದ್ದು ನಿಜಕ್ಕೂ ಅಚ್ಚರಿ.
ಬಹು ಬೇಡಿಕೆಯ, ಹೊಸತು ಮತ್ತು ಹಳೆಯ ಎರಡೂ ತಲೆಮಾರುಗಳನ್ನು ಪ್ರಭಾವಿಸುತ್ತಿರುವ ನಟ, ನಿರೂಪಕ, ಕರ್ನಾಟಕದ ಕಣ್ಮಣಿ ರಮೇಶ್ ಅರವಿಂದ್ ನನ್ನ ಕೆಲಸಗಳನ್ನು ಮೆಚ್ಚಿ, ಕೊಟ್ಟ ಮಾತಿನಂತೆಯೇ ಕುದ್ರು ನೆಸ್ಟ್ ಗೆ ಬಂದಿದ್ದು ಅಚ್ಚರಿಯಲ್ಲೇ ಅಚ್ಚರಿ.
ಕರಾವಳಿಯ ಶೈಲಿಯಲ್ಲೇ ಫೋಟೋ ಶೂಟ್ ಪ್ಲ್ಯಾನ್ ಮಾಡಿದ್ದೆ. ಫೋನಲ್ಲಿ ಎಲ್ಲವನ್ನೂ ತಿಳಿಸಿದ್ದೆ. ನೀವೇನು ಮಾಡಿಸ್ತೀರೋ ನಾನದಕ್ಕೆ ರೆಡಿ ಎಂದವರ ಉತ್ಸಾಹ ಇವತ್ತು ನೋಡಬೇಕು! ಅದೆಂತಹ ಎನರ್ಜಿ ಅವರೊಳಗಿದೆ. ಊಟ ಮಾಡಿದ್ದು ಮೂರು ಗಂಟೆಗೆ ಎಂಬುದು ಈಗ ನೆನಪಾಗುತ್ತಿದೆಯಷ್ಟೆ.
https://www.instagram.com/reel/CjmvZfQLxKj/?utm_source=ig_embed&ig_rid=a69ed351-a8d5-4b26-b8b4-ccacd7c30157
ರಮೇಶ್ ಅರವಿಂದ್ ಯಕ್ಷಗಾನದ ಬಣ್ಣ ಹಚ್ಚಿ, ಗೆಜ್ಜೆ ತೊಟ್ಟು, ಹೆಜ್ಜೆ ಹಾಕಿದ ಪರಿಯಂತೂ ರೋಮಾಂಚನ. “ಯಕ್ಷಗಾನದ ವೇಷ ತೊಟ್ಟ ನನ್ನಲ್ಲೀಗ ದಿವ್ಯತೆಯ ಭಾವ ಬೆಳೆದಿದೆ. ಎಂಟಡಿ, ನೂರೈವತ್ತು ಕೆ.ಜಿ ಬೆಳೆದವನಂತೆ ಅನಿಸುತ್ತಿದೆ. ನಾನಿವತ್ತು ಬಹಳವೇ ಶಕ್ತಿ ಶಾಲಿ, ಎದುರಿಗೇನಾದರೂ ರಾಕ್ಷಸರು ಬಂದರೆ ಹೊಡೆದುರುಳಿಸಿ ಬಿಡುತ್ತೇನೆ” ಎಂದಾಗ ನಮ್ಮಲ್ಲಂತೂ ವಿದ್ಯುತ್ ಸಂಚಾರ.
ರಮೇಶ್ ಅರವಿಂದ್ ಲವಲವಿಕೆ, ಶಿಸ್ತು, ಸಮಯಪ್ರಜ್ಞೆ, ಕಲಾರಾಧನೆ, ಕಮಿಟ್ಮೆಂಟಿಗೆ ಈ ವೀಡಿಯೋ ಸಾಕ್ಷಿ. ಯಕ್ಷಗಾನದ ವೇಷ ಭೂಷಣ ಹಾಗೂ ಹೆಜ್ಜೆ ಕಲಿಸಿದ ಶೈಲೇಶ್ ತೀರ್ಥಹಳ್ಳಿಯವರಿಗೆ ವಿಶೇಷ ಕೃತಜ್ಞತೆಗಳು ಎಂದಿದ್ದಾರೆ.