ಬೆಂಗಳೂರು: ರಾಷ್ಟ್ರ ರಾಜಧಾನಿಯ ಹೊರಗೆ ಪ್ರಮುಖ ಕಾರ್ಯಕ್ರಮಗಳನ್ನು ನಡೆಸುವ ಉಪಕ್ರಮಗಳ ಭಾಗವಾಗಿ ಮುಂದಿನ ವರ್ಷ ಆರ್ಮಿ ಡೇ ಪರೇಡ್ ಅನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು. 1949 ರಲ್ಲಿ ಈ ದಿನದಂದು ಭಾರತೀಯ ಸೇನೆಯ ಕಮಾಂಡರ್-ಇನ್-ಚೀಫ್ ಆಗಿ ಮೊದಲ ಭಾರತೀಯ ಅಧಿಕಾರಿ ಅಧಿಕಾರ ವಹಿಸಿಕೊಂಡ ನೆನಪಿಗಾಗಿ ಪ್ರತಿ ವರ್ಷ ಜನವರಿ 15 ರಂದು ಸೇನಾ ದಿನವನ್ನು ಆಚರಿಸಲಾಗುತ್ತದೆ.
ಮುಂದಿನ ಆರ್ಮಿ ಡೇ ಪರೇಡ್ ಬೆಂಗಳೂರಿನಲ್ಲಿ ಜನವರಿ 15, 2023 ರಂದು ನಡೆಯಲಿದೆ. ಸೇನಾ ದಿನದ ಪರೇಡ್ ಅನ್ನು ರಾಷ್ಟ್ರ ರಾಜಧಾನಿಯಿಂದ ಹೊರಗೆ ಸ್ಥಳಾಂತರಿಸುವುದು ಇದೇ ಮೊದಲು ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿಯ ಹೊರಗೆ ರಾಷ್ಟ್ರೀಯ ಮತ್ತು ಮಿಲಿಟರಿ ಕಾರ್ಯಕ್ರಮಗಳನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನಗಳಿಗೆ ಅನುಗುಣವಾಗಿ, ಭಾರತೀಯ ವಾಯುಪಡೆಯು ತನ್ನ ವಾಯುಪಡೆ ದಿನದ ಪರೇಡ್ ಮತ್ತು ಫ್ಲೈಪಾಸ್ಟ್ ಅನ್ನು ಚಂಡೀಗಢದಲ್ಲಿ ನಡೆಸಿತ್ತು.
ಸ್ಥಳದ ಬದಲಾವಣೆಯಿಂದಾಗಿ, ಈ ಬಾರಿ ಅಕ್ಟೋಬರ್ 8 ರಂದು ಏರ್ ಫೋರ್ಸ್ ಡೇಗೆ ಒಂದು ದಿನ ಮುಂಚಿತವಾಗಿಯೆ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪುಷ್ಪಾರ್ಚನೆಯನ್ನು ನಡೆಸಲಾಯಿತು. ಸೇನೆಯು ಸಹ ಇದನ್ನು ಅನುಕರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.