ಸುರತ್ಕಲ್: ಅಕ್ಟೋಬರ್ 18 ರಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯಿಂದ ಟೋಲ್ ಗೇಟ್ ಗೆ ಮುತ್ತಿಗೆ

ಸುರತ್ಕಲ್: ಇಲ್ಲಿನ ಎನ್.ಐ.ಟಿ.ಕೆ ಕಾಲೇಜಿನ ಬಳಿ ಇರುವ ಟೋಲ್ ಗೇಟ್ ಆರು ತಿಂಗಳ ತಾತ್ಕಾಲಿಕ ಅವಧಿಗೆ ಆರಂಭಗೊಂಡು ಇದೀಗ ಏಳು ವರ್ಷಗಳನ್ನು ಪೂರೈಸಿದೆ. ಜನರ ವಿರೋಧದ ನಡುವೆಯೂ ಅಕ್ರಮವಾಗಿ, ನಿಯಮಗಳ ಉಲ್ಲಂಘನೆ ನಡೆಸಿ ಜನರಿಂದ ಬಲವಂತವಾಗಿ ಹಣ ಕೀಳುತ್ತಿರುವ ವಿರುದ್ದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ದ.ಕ ಮತ್ತು ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಸೇರಿ ಅಕ್ಟೋಬರ್ 18 ರಂದು ಬೆಳಗ್ಗೆ 9.30 ಗಂಟೆಗೆ ಟೋಲ್ ಗೇಟ್ ಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಸುರತ್ಕಲ್ ಮತ್ತು ಬಿ.ಸಿ.ರೋಡ್ ನಲ್ಲಿ ಟೋಲ್ ಗೇಟ್ ಗಳಿದ್ದು, ಎರಡೂ ಕಡೆಗಳಿಂದಲೂ ಸುಂಕ ವಸೂಲಾತಿ ಮಾಡುವುದು ಹಗಲು ದರೋಡೆಗೆ ಸಮ. ಸುರತ್ಕಲ್-ಬಿ.ಸಿ.ರೋಡ್ ಹೆದ್ದಾರಿಯಲ್ಲಿ 400 ಕೋಟಿ ರೂ. ಸುಂಕ ವಸೂಲಾತಿ ಮಾಡಲಾಗಿದ್ದು, ಆಳುವವರ ಹಣದ ದಾಹ ಇನ್ನೂ ತೀರಿಲ್ಲ. ಸುರತ್ಕಲ್ ಟೋಲ್ ಗೇಟನ್ನು ತೆರವುಗೊಳಿಸುವಂತೆ ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಸಂಸದ ಮತ್ತು ಶಾಸಕರು ಸಿದ್ದ ಉತ್ತರಗಳನ್ನು ನೀಡುತ್ತಲೇ ಬಂದಿದ್ದಾರೆ. 20 ದಿನಗಳಲ್ಲಿ ಟೋಲ್ ತೆರವು ಗೊಳಿಸುತ್ತೇವೆಂದು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಸೆಪ್ಟಂಬರಿನಲ್ಲಿ ಹೇಳಿದ್ದಾರೆ. ಕರ್ನಾಟಕ ಸರಕಾರವೂ ವಿಧಾನಸಭೆಯಲ್ಲಿ ಈ ಬಗ್ಗೆ ಹೇಳಿಕೆ ನೀಡಿದೆ. ಆದರೆ ಟೋಲ್ ಮಾತ್ರ ಇನ್ನೂ ತೆರವುಗೊಂಡಿಲ್ಲ ಎಂದು ಸಮಿತಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಸಮಿತಿಯ ಸಾಮೂಹಿಕ ಧರಣಿಯಲ್ಲಿ ಸರ್ವ ಸಮ್ಮತ ನಿರ್ಧಾರದ ಅನ್ವಯ ಅಕ್ಟೋಬರ್ 18 ರಂದು ‘ನೇರ ಕಾರ್ಯಾಚರಣೆ ದಿನ’ವಾಗಿ ಆಚರಿಸಲು ತೀರ್ಮಾನಿಸಿದ್ದು, ತುಳುನಾಡಿನ ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ಟೋಲ್ ಗೇಟ್ ಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದು ಟೋಲ್ ಸುಂಕ ವಸೂಲಾತಿಯನ್ನು ಖಾಯಂ ಆಗಿ ಕೊನೆಗೊಳಿಸುವ ಅಂತಿಮ ಪ್ರಯತ್ನವಾಗಿದೆ. ಶಾಂತಿಯುತವಾಗಿ ನಡೆಯುವ ಈ ಮುತ್ತಿಗೆಗೆ ಸಾರ್ವಜನಿಕರೆಲ್ಲರೂ ಸಹಕಾರ ನೀಡಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹೇಳಿದೆ.