ಕಾಂಗ್ರೆಸ್ ಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಮಹೇಶ್ ಠಾಕೂರ್

ಉಡುಪಿ: ಖಾಸಗಿ ಕಾರ್ಯಕ್ರಮದ ನಿಮಿತ್ತ ಅ.8 ರಂದು ಉಡುಪಿ ನಗರಕ್ಕೆ ಆಗಮಿಸಿದ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಮಾಂಸಾಹಾರವನ್ನು ಸ್ವೀಕರಿಸಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬೇಟಿ ‌ನೀಡಿದ್ದಾರೆ ಎಂಬ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಸುಳ್ಳು ಆರೋಪವನ್ನು ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಸರಾಸಗಟಾಗಿ ತಳ್ಳಿಹಾಕಿದ್ದಾರೆ.

ಸನಾತನ ಹಿಂದೂ ಧರ್ಮದ ಪ್ರತಿಪಾದಕ, ಈ ಮಣ್ಣಿನ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಘನತೆ ಗೌರವದ ಸಂಪೂರ್ಣ ಅರಿವುಳ್ಳ ಹಿಂದುತ್ವದ ಐಕಾನ್ ಎಂದೆನಿಸಿರುವ ಡಾ. ಪ್ರಮೋದ್ ಸಾವಂತ್ ರವರ ಶಿಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸಿಗರಿಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಡಾ. ಸಾವಂತ್ , ಉಡುಪಿಯ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವಿಶೇಷ ಸೌಲಭ್ಯವನ್ನು ಉದ್ಘಾಟಿಸಲು ನಗರಕ್ಕೆ ಆಗಮಿಸಿದ್ದು, ಕಾರ್ಯಕ್ರಮ ಮುಗಿದ ಬಳಿಕ ಪ್ರವಾಸಿ ಬಂಗಲೆಯಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಹಾಗೂ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲುರವರ ಜೊತೆ ಸಸ್ಯಾಹಾರಿ ಭೋಜನವನ್ನು ಸ್ವೀಕರಿಸಿ ಬಳಿಕ ಶ್ರೀ ಕೃಷ್ಣ ಮಠ ಸಂದರ್ಶನಕ್ಕೆ ತೆರಳಿರುವುದಾಗಿ ಡಾ. ಕೃಷ್ಣಪ್ರಸಾದ್ ಈಗಾಗಲೇ ಸ್ಫಷ್ಟೀಕರಣವನ್ನು ನೀಡಿದ್ದಾರೆ.

‘ನಾನು ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುತ್ತೇನೆ’ ಎಂದು ಗಂಟಾಘೋಷವಾಗಿ ಬಹಿರಂಗ ಹೇಳಿಕೆ ನೀಡಿರುವ ಮಾಜಿ ಸಿ.ಎಂ. ಸಿದ್ಧರಾಮಯ್ಯ ನವರಂತಹ ನಾಸ್ತಿಕ ಕಾಂಗ್ರೆಸ್ ಮುಖಂಡರನ್ನೊಳಗೊಂಡಿರುವ ಹಿಂದೂ ವಿರೋಧಿ ಮನಸ್ಥಿತಿಯ ಕಾಂಗ್ರೆಸಿಗರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯವಿದೆ?

ದೂರದರ್ಶಿತ್ವದ ಚಿಂತನೆಯ ಅಭಿವೃದ್ಧಿ ಪರ ಆಡಳಿತದ ಮೂಲಕ ಎರಡನೇ ಅವಧಿಗೆ‌ ಗೋವಾ ಮುಖ್ಯಮಂತ್ರಿಯಾಗಿ, ಕರ್ನಾಟಕ ರಾಜ್ಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಡಾ. ಪ್ರಮೋದ್ ಸಾವಂತ್ ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲೂ ಪ್ರವಾಸೋದ್ಯಮ ಹಾಗೂ ವ್ಯಾಪಾರೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿರುವುದನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ರವರಿಗೆ ಸಹಿಸಲಾಗದೆ ಮಾಡಿರುವ ಈ ಆಧಾರ ರಹಿತ ಆರೋಪ ಕೇವಲ ಸ್ವಯಂ ಪ್ರಚಾರದ ಗೀಳು ಮತ್ತು ಬಿಜೆಪಿ ವಿರುದ್ಧದ ಅಪಪ್ರಚಾರದ ಟೂಲ್‌ಕಿಟ್ ನ ಭಾಗವಷ್ಟೇ ಎಂದು ಮಹೇಶ್ ಠಾಕೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.