ಕುಂದಾಪುರ: 2022-23ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯು ಅಕ್ಟೋಬರ್ 7 ಮತ್ತು 8 ರಂದು ಶ್ರೀ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಬಿಡದಿ ರಾಮನಗರ ಜಿಲ್ಲೆಯಲ್ಲಿ ನಡೆದಿದ್ದು, ಕುಂದಾಪುರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಮಾನಸ ದೇವಾಡಿಗ ಮತ್ತು ನಿಹಾಲ್ ಎನ್ ಶೆಟ್ಟಿ ಉಡುಪಿ ಜಿಲ್ಲೆಯನ್ನು ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿ ದ್ವಿತೀಯ ಹಾಗೂ ಚತುರ್ಥ ಸ್ಥಾನಿ ವಿಜೇತರಾಗಿ, ಓಡಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ನಡೆಯುವ ರಾಷ್ಟ್ರಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಅರ್ಹರಾಗಿರುತ್ತಾರೆ.
ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮಾನಸ ದೇವಾಡಿಗ ಇವರು ಸತೀಶ್ ದೇವಾಡಿಗ ಮತ್ತು ಶೈಲಜಾ ದಂಪತಿಯ ಪುತ್ರಿ. ವಿಜ್ಞಾನ ವಿಭಾಗದ ದ್ವಿತೀಯ ಪಿಯುಸಿ ವಿದ್ಯಾರ್ಥಿ ನಿಹಾಲ್ ಎನ್ ಶೆಟ್ಟಿ ಇವರು ನಾರಾಯಣ ಶೆಟ್ಟಿ ಮತ್ತು ಮಂಜುಳಾ ಶೆಟ್ಟಿ ದಂಪತಿಯ ಪುತ್ರ.
ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆಯನ್ನು ಮತ್ತು ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿ ನಿಂತ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸತೀಶ್ ಕುಮಾರ್ ಮತ್ತು ಜಯಲತಾ ಅವರನ್ನು ಎಂ.ಎಂ ಹೆಗ್ಡೆ ಎಜುಕೇಶನಲ್ ಆ್ಯಂಡ್ ಚಾರೀಟೇಬಲ್ ಟ್ರಸ್ಟ್ನ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ, ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ನ ಚೇರ್ಮೆನ್ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಹಾಗೂ ಕೋಶಾಧಿಕಾರಿ ಭರತ್ ಶೆಟ್ಟಿ, ಮತ್ತು ಸಂಸ್ಥೆಯ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ರಾಷ್ಟ್ರಮಟ್ಟದಲ್ಲೂ ಯಶಸ್ವಿಯಾಗಲಿ ಎಂದು ಶುಭಹಾರೈಸಿದ್ದಾರೆ.