ಚೆನ್ನೈ: ‘ಹೆಲಿಕಾಪ್ಟರ್ ಶಾಟ್’ ಅನ್ನು ಜನಪ್ರಿಯಗೊಳಿಸಿದ ಭಾರತೀಯ ಕ್ರಿಕೆಟ್ ತಾರೆ ಮಹೇಂದ್ರ ಸಿಂಗ್ ಧೋನಿ ಅವರು ‘ದ್ರೋಣಿ’ ಹೆಸರಿನ ಗ್ರಾಹಕ ಕ್ಯಾಮೆರಾ ಡ್ರೋನ್ ಅನ್ನು ಬಿಡುಗಡೆ ಮಾಡಿದ್ದಾರೆ. ಎಂಎಸ್ ಧೋನಿ ರಾಯಭಾರಿಯಾಗಿರುವ ಗರುಡಾ ಏರೋಸ್ಪೇಸ್ ಈ ಸುಧಾರಿತ ವೈಶಿಷ್ಟ್ಯಗಳಿರುವ ಮೇಡ್-ಇನ್-ಇಂಡಿಯಾ ಕ್ಯಾಮೆರಾ ಡ್ರೋನ್ ಅನ್ನು ತಯಾರಿಸಿದೆ.
ಡ್ರೋನ್ ತಂತ್ರಜ್ಞಾನದಲ್ಲಿ ಆದ್ಯಪ್ರವರ್ತಕನಾಗಿರುವ ಗರುಡ ಏರೋಸ್ಪೇಸ್, ಇದುವರೆಗೆ ಕೃಷಿ ಕೀಟನಾಶಕ ಸಿಂಪಡಣೆ, ಸೌರಫಲಕ ಸ್ವಚ್ಛತೆ, ಕೈಗಾರಿಕಾ ಪೈಪ್ಲೈನ್ ತಪಾಸಣೆ, ಮ್ಯಾಪಿಂಗ್, ಸರ್ವೇಯಿಂಗ್, ಸಾರ್ವಜನಿಕ ಪ್ರಕಟಣೆಗಳು ಮತ್ತು ವಿತರಣಾ ಸೇವೆಗಳಿಗಾಗಿ ಭಾರತದಲ್ಲಿ ನಿರ್ಮಿತ ಡ್ರೋನ್ ಗಳನ್ನು ತಯಾರಿಸುತ್ತಿದೆ. ಇದೀಗ ಈ ಸಂಸ್ಥೆಯಿಂದ ಗ್ರಾಹಕ ಡ್ರೋನ್ ‘ದ್ರೋಣಿ’ ಮಾರುಕಟ್ಟೆಗೆ ಕಾಲಿಟ್ಟಿದೆ. ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಅಗ್ನೀಶ್ವರ್ ಜಯಪ್ರಕಾಶ್ ಪ್ರಕಾರ, ಉತ್ಪನ್ನವು 2022 ರ ಅಂತ್ಯದ ವೇಳೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.
ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ವಿಶೇಷವಾಗಿ ಕೀಟನಾಶಕ ಸಿಂಪಡಿಸುವ ಗುರಿಯನ್ನು ಹೊಂದಿರುವ ಹೊಸ ‘ಕಿಸಾನ್ ಡ್ರೋನ್’ ಅನ್ನೂ ಬಿಡುಗಡೆಗೆಗೊಳಿಸಲಾಯಿತು. ಬ್ಯಾಟರಿ ಚಾಲಿತ ಈ ಡ್ರೋನ್ ದಿನಕ್ಕೆ 30 ಎಕರೆ ಕೃಷಿ ಪ್ರದೇಶದಲ್ಲಿ ಕೀಟನಾಶಕ ಸಿಂಪಡಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಧೋನಿ, ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ತಾವು ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದನ್ನು ನೆನಪಿಸಿಕೊಂಡರು. ಕೃಷಿಕರಿಗೆ ಸಹಾಯಮಾಡುವ ಡ್ರೋನ್ಗಳ ಪಾತ್ರವನ್ನು ಅವರು ಒತ್ತಿ ಹೇಳಿದರು.