ಮುಂದಿನ ವರ್ಷದಿಂದ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳ ಬೆಲೆಯೇರಿಕೆ ಸಾಧ್ಯತೆ

ನವದೆಹಲಿ: ಮುಂದಿನ ವರ್ಷ ಏಪ್ರಿಲ್‌ನಿಂದ ಪ್ರಾರಂಭವಾಗುವ ಕಟ್ಟುನಿಟ್ಟಾದ ಹೊರಸೂಸುವಿಕೆ ಮಾನದಂಡಗಳನ್ನು ಪೂರೈಸಲು ಆಟೋಮೊಬೈಲ್ ಕಂಪನಿಗಳು ವಾಹನಗಳನ್ನು ನವೀಕರಿಸಲು ಹೂಡಿಕೆ ಮಾಡುತ್ತಿರುವುದರಿಂದ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳ ಬೆಲೆಗಳು ಏರಿಕೆಯಾಗುವ ಸಾಧ್ಯತೆಯಿದೆ. ಭಾರತೀಯ ಆಟೋಮೊಬೈಲ್ ಉದ್ಯಮವು ಪ್ರಸ್ತುತ ತಮ್ಮ ಉತ್ಪನ್ನಗಳನ್ನು ಭಾರತ್ ಸ್ಟೇಜ್ VI ರ ಎರಡನೇ ಹಂತವನ್ನು ಪೂರೈಸಲು ಕೆಲಸ ಮಾಡುತ್ತಿದೆ, ಇದು ನೈಜ ಸಮಯದ ಚಾಲನಾ ಪರಿಸ್ಥಿತಿಗಳಲ್ಲಿ ಯುರೋ-VI ಹೊರಸೂಸುವಿಕೆಯ ಮಾನದಂಡಗಳಿಗೆ ಸಮನಾಗಿರುತ್ತದೆ.

ಕಾರು ಮುಂತಾದ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳಿಗೆ ಮುಂದಿನ ಹಂತದ ಹೊರಸೂಸುವಿಕೆ ಮಾನದಂಡಗಳನ್ನು ಪೂರೈಸಲು ಹೆಚ್ಚು ಅತ್ಯಾಧುನಿಕ ಉಪಕರಣಗಳನ್ನು ಸೇರಿಸುವ ಅಗತ್ಯವಿದೆ. ಉದ್ದಿಮೆದಾರರು ಕೂಡಾ ಒಟ್ಟಾರೆ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳವನ್ನು ನಿರೀಕ್ಷಿಸುತ್ತಿರುವುದರಿಂದ ಈ ಹೆಚ್ಚುವರಿ ವೆಚ್ಚವನ್ನು ಮುಂದಿನ ವರ್ಷದಿಂದ ಖರೀದಿದಾರರಿಗೆ ರವಾನಿಸಬಹುದು ಎಂದು ಅಂದಾಜಿಸಲಾಗಿದೆ. ರಿಯಲ್ ಟೈಮ್ ಡ್ರೈವಿಂಗ್ ಎಮಿಷನ್ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ವಾಹನಗಳು ಆನ್-ಬೋರ್ಡ್ ಸೆಲ್ಫ್-ಡಯಾಗ್ನಾಸ್ಟಿಕ್ ಸಾಧನವನ್ನು ಹೊಂದಿರಬೇಕು.

ಅಂದರೆ ವ್ಯಕ್ತಿಯು ವಾಹನವನ್ನು ಚಲಾಯಿಸುತ್ತಿರುವಾಗ ಆ ಹೊತ್ತಿನ ಹೊರಸೂಸುವಿಕೆ ಪ್ರಮಾಣವನ್ನು ಚಾಲಕನಿಗೆ ತೋರಿಸುವ ಸಲುವಾಗಿ ಈ ಸಾಧನವನ್ನು ವಾಹನಗಳಲ್ಲಿ ಅಳವಡಿಸಿರಬೇಕು. ಇದಲ್ಲದೆ, ವಾಹನವು ಬಳಸುವ ಸೆಮಿಕಂಡಕ್ಟರ್‌ಗಳನ್ನು ಸಹ ನವೀಕರಿಸಬೇಕಾಗುತ್ತದೆ. ಇದರಿಂದ ಸಾರಜನಕ, ಇಂಗಾಲಾಮ್ಲ, ಸಲ್ಫರ್ ಮುಂತಾದವುಗಳ ಹೊರಸೂಸುವಿಕೆಯನ್ನು ಮೇಲ್ವಿಚಾರಣೆ ಮಾಡುವುದು ಸುಲಭವಾಗಲಿದೆ. ಈ ಎಲ್ಲಾ ಕಾರಣಗಳಿಂದಾಗಿ ಮುಂದಿನ ವರ್ಷದಿಂದ ವಾಹನಗಳು ದುಬಾರಿಯಾಗುವ ಸಾಧ್ಯತೆಗಳಿವೆ.