ಹಿರಿಯ ರಾಜಕಾರಾಣಿ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಮ್ ಸಿಂಗ್ ಯಾದವ್ ಇನ್ನಿಲ್ಲ

ಲಕ್ನೋ: ಸಮಾಜವಾದಿ ಪಕ್ಷದ ಸಂಸ್ಥಾಪಕ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಸೋಮವಾರ ತಮ್ಮ 82 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಯ ಐಸಿಯುನಲ್ಲಿ ಹಲವು ದಿನಗಳನ್ನು ಕಳೆದ ನಂತರ ಹಿರಿಯ ರಾಜಕಾರಣಿ ನಿಧನರಾಗಿದ್ದಾರೆ.

ಇದಕ್ಕೂ ಮುನ್ನ, ಯಾದವ್ ಅವರಿಗೆ ಜೀವರಕ್ಷಕ ಔಷಧಗಳನ್ನು ನೀಡಲಾಗಿತ್ತು ಎಂದು ಆಸ್ಪತ್ರೆಯು ಶುಕ್ರವಾರ ಆರೋಗ್ಯ ಬುಲೆಟಿನ್‌ನಲ್ಲಿ ತಿಳಿಸಿತ್ತು. ನಾಯಕನ ಸಾವಿನ ಸುದ್ದಿಯನ್ನು ಎಸ್‌ಪಿ ಮುಖ್ಯಸ್ಥ ಮತ್ತು ಯಾದವ್ ಅವರ ಪುತ್ರ ಅಖಿಲೇಶ್ ಟ್ವಿಟರ್‌ನಲ್ಲಿ ಖಚಿತಪಡಿಸಿದ್ದಾರೆ.

ಮುಲಾಯಂ ಸಿಂಗ್ ಯಾದವ್ ಅವರು ನವೆಂಬರ್ 22, 1939 ರಂದು ಜನಿಸಿದರು. ಭಾರತದ ಹಿರಿಯ ರಾಜಕಾರಣಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ, ಉತ್ತರ ಪ್ರದೇಶದ ಮೈನ್‌ಪುರಿ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರಾಗಿದ್ದರು. ಇವರು ಮೂರು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

ಹಿರಿಯ ರಾಜಕಾರಣಿಯ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದು, “ಶ್ರೀ ಮುಲಾಯಂ ಸಿಂಗ್ ಯಾದವ್ ಜಿ ಅವರು ಗಮನಾರ್ಹ ವ್ಯಕ್ತಿತ್ವ ಹೊಂದಿದ್ದರು. ಜನರ ಸಮಸ್ಯೆಗಳ ಬಗ್ಗೆ ಸಂವೇದನಾಶೀಲರಾಗಿದ್ದ ಅವರು ವಿನಮ್ರ ಮತ್ತು ತಳಮಟ್ಟದ ನಾಯಕರಾಗಿ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟರು. ಅವರು ಶ್ರದ್ಧೆಯಿಂದ ಜನರಿಗೆ ಸೇವೆ ಸಲ್ಲಿಸಿದರು ಮತ್ತು ಲೋಕನಾಯಕ ಜೆಪಿ ಮತ್ತು ಡಾ. ಲೋಹಿಯಾ ಅವರ ಆದರ್ಶಗಳನ್ನು ಜನಪ್ರಿಯಗೊಳಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು” ಎಂದು ಟ್ವೀಟಿಸಿದ್ದಾರೆ.