ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಲಾಂ ಮಂಗಳಾರತಿ ಪದ್ಧತಿ ಇಲ್ಲ: ಬಿ.ಎಂ. ಸುಕುಮಾರ್ ಶೆಟ್ಟಿ

ಕುಂದಾಪುರ: ಇಲ್ಲಿನ ಬಹುಪ್ರಸಿದ್ದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಲಾಂ ಮಂಗಳಾರತಿ ಪದ್ಧತಿ ಇಲ್ಲ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಇಲ್ಲಿ ಯಾವುದೇ ರೀತಿಯ ಸಲಾಂ ಮಂಗಳಾರತಿ ಪದ್ಧತಿ ನಡೆಯುವುದಿಲ್ಲ, ನಾನು 40 ವರ್ಷದಿಂದ ಕೊಲ್ಲೂರು ದೇವಸ್ಥಾನದ ಭಕ್ತನಾಗಿದ್ದೇನೆ, ಹಾಗಾಗಿ ನನಗೆ ಈ ಬಗ್ಗೆ ತಿಳುವಳಿಕೆ ಇದೆ. ಮೂಕಾಂಬಿಕಾ ದೇವಸ್ಥಾನಕ್ಕೆ ಹತ್ತು ವರ್ಷಗಳ ಕಾಲ ಆಡಳಿತ ಮೊಕ್ತೇಸರನಾಗಿದ್ದೆ ಕೊಲ್ಲೂರಿನಲ್ಲಿ ಯಾವುದೇ ರೀತಿಯ ಸಲಾಂ ಮಂಗಳಾರತಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೊಲ್ಲೂರು ದೇವಸ್ಥಾನದಲ್ಲಿ ಸಲಾಂ ಮಂಗಳಾರತಿ ನೆರವೇರಿಸುತ್ತಿದ್ದಾರೆ ಎಂಬ ವಿಚಾರ ಗೊಂದಲಕ್ಕೆ ಕಾರಣವಾಗಿದೆ, ನಮ್ಮ ದೇವಸ್ಥಾನದಲ್ಲಿ ಸಲಾಂ ಹೆಸರಿನಲ್ಲಿ ಮಂಗಳಾರತಿ ನಡೆಯುತ್ತಿಲ್ಲ. ಸಲಾಂ ಹೆಸರಿಗೆ ಮತ್ತು ಟಿಪ್ಪು ಇಲ್ಲಿ ಬಂದದ್ದಕ್ಕೆ ಯಾವುದೇ ದಾಖಲೆಗಳು ಇಲ್ಲ. ಈ ಬಗ್ಗೆ ನಮ್ಮಲ್ಲಿ ಯಾವುದೇ ಲಿಖಿತ ದಾಖಲೆಗಳು ಸಿಗುವುದಿಲ್ಲ. ಪ್ರದೋಷ ಕಾಲದಲ್ಲಿ ಮಂಗಳಾರತಿಯನ್ನು ದೇವಿಗೆ ಬೆಳಗುತ್ತೇವೆ. ಸಂಜೆಯ ಮಂಗಳಾರತಿಗೆ ಸಲಾಂ ಎಂದು ಕರೆಯುತ್ತಾರೆ. ಸಲಾಂ ಹೆಸರು ವಾಡಿಕೆಯಲ್ಲಿದೆ ಹೊರತು ಲಿಖಿತವಾಗಿ ಇಲ್ಲ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕಿರಾಡಿ ಚಂದ್ರಶೇಖರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಸಲಾಂ ಮಂಗಳಾರತಿ ಹೆಸರಿನ ಯಾವುದೇ ಧಾರ್ಮಿಕ ವಿಧಿಯನ್ನು ದೇವಾಲಯದಲ್ಲಿ ನಡೆಸಲಾಗುತ್ತಿಲ್ಲ ಎನ್ನಲಾಗುತ್ತಿದೆ. ಆಡುಭಾಷೆಯಲ್ಲಿ ಬಂದ ಜನಪದದ ನಂಬಿಕೆಯಂತೆ, ಈ ಕ್ಷೇತ್ರಕ್ಕೆ ಟಿಪ್ಪು ಭೇಟಿ ನೀಡಿದ ನೆನಪಿನಲ್ಲಿ ನಡೆಸುವ ಪೂಜೆಯನ್ನು ಜನರೇ ಸಲಾಂ ಮಂಗಳಾರತಿ ಎಂದು ಕರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರವನ್ನು ಈಗಾಗಲೇ ಅರ್ಚಕರು ಸ್ಪಷ್ಟಪಡಿಸಿದ್ದಾರೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕಿರಾಡಿ ಚಂದ್ರಶೇಖರ ಶೆಟ್ಟಿ ಅವರು ಕೂಡ ಈ ವಿಚಾರವನ್ನು ಖಚಿತಪಡಿಸಿದ್ದಾರೆ.