ಉಡುಪಿ: ಮಲ್ಪೆಯ ಸೈಂಟ್ ಮೇರೀಸ್ ದ್ವೀಪ ಇದೀಗ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಮಳೆಯ ಹಿನ್ನೆಲೆಯಲ್ಲಿ ಸೈಂಟ್ ಮೇರಿಸ್ ದ್ವೀಪಕ್ಕೆ ತಾತ್ಕಾಲಿಕವಾಗಿ ಪ್ರವಾಸಿಗರ ಪ್ರವೇಶವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಬುಧವಾರದಿಂದ ಮತ್ತೆ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ಪ್ರವಾಸಿಗರಿಗಾಗಿ ವಿವಿಧ ಸೌಲಭ್ಯ ಮತ್ತು ಮುಂಜಾಗೃತಾ ಕ್ರಮ
ಅಡಿಕೆ, ತೆಂಗಿನ ಮರದ ಎಲೆಗಳಿಂದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಮಿಸಲಾಗಿದೆ. ಪ್ರವೇಶ ಶುಲ್ಕ ಪ್ರತೀ ವ್ಯಕ್ತಿಗೆ 300 ರೂ. ನಿಯಮಗಳ ಉಲ್ಲಂಘನೆ ಕಂಡು ಬಂದಲ್ಲಿ 500 ರೂ. ದಂಡ ವಿಧಿಸಲಾಗುತ್ತದೆ.
ತೀರದಿಂದ ದ್ವೀಪಕ್ಕೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ಬರಲು ವ್ಯವಸ್ಥೆ ಇದ್ದು, ಇದನ್ನು ಸ್ಥಳೀಯ ಖಾಸಗಿ ಬೋಟ್ ಮಾಲಕರು ನಿರ್ವಹಿಸುತ್ತಿದ್ದಾರೆ. ದ್ವೀಪದ ಈಶಾನ್ಯ ಭಾಗದಲ್ಲಿ 110 ಮೀ ಅಗಲ, 100 ಮೀ ಉದ್ದದ ಈಜು ವಲಯವನ್ನು ಗುರುತಿಸಲಾಗಿದ್ದು, ಅಪಾಯಕಾರಿ 5 ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ಎಚ್ಚರಿಕೆ ಫಲಕ ಮತ್ತು ಧ್ವಜವನ್ನು ಇರಿಸುವ ಮೂಲಕ ಪ್ರವಾಸಿಗರಿಗೆ ಸೂಚನೆ ನೀಡಲಾಗುತ್ತಿದೆ. ಸುರಕ್ಷತಾ ಜಾಕೆಟ್‍ಗಳು, ಲೈಫ್ ಗಾರ್ಡ್, ಪ್ರಥಮ ಚಿಕಿತ್ಸೆ ವ್ಯವಸ್ಥೆಗಳೊಂದಿಗೆ ಸ್ಥಿರವಾಗಿರುವ ಹಗ್ಗವನ್ನು 6 ವಿಭಿನ್ನ ಸ್ಥಳಗಳಲ್ಲಿ ನೇತುಹಾಕಲಾಗಿದೆ. 4 ಗಡಿಯಾರ ಗೋಪುರಗಳಿದ್ದು, 7 ಸೆಲ್ಫಿ ಪಾಯಿಂಟ್ ಗಳಲ್ಲಿ 3ನ್ನು ರಚಿಸಲಾಗಿದ್ದು ಉಳಿದಂತೆ 4 ಸೆಲ್ಫಿ ಪಾಯಿಂಟ್ ಗಳನ್ನು ಹಾಕಲಾಗುತ್ತದೆ.
ದ್ವೀಪದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಮತ್ತು ವಸ್ತ್ರ ಬದಲಾವಣೆಯ ಕೋಣೆಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಲಗೇಜ್ ಕೊಠಡಿ ವ್ಯವಸ್ಥೆ ಕೂಡಾ ಇದೆ.
ನಿಯಮಗಳು
ಪ್ರವಾಸಿಗರು ದ್ವೀಪವನ್ನು ಪ್ರವೇಶಿಸುವಾಗ ಮಗುವಿನ ಆಹಾರ ಮತ್ತು ಹಿರಿಯ ಔಷಧವನ್ನು ಹೊರತು ಪಡಿಸಿ ಪ್ಲಾಸ್ಟಿಕ್ ವಸ್ತುಗಳು, ಪ್ಲಾಸ್ಟಿಕ್ ನಲ್ಲಿ ಸುತ್ತಿದ ಆಹಾರ ಪದಾರ್ಥಗಳು, ಮದ್ಯ, ಅಮಲು ಪದಾರ್ಥ
ಕೊಂಡೊಯ್ಯುವುದನ್ನು ನಿರ್ಬಂಧಿಸಲಾಗಿದೆ. ಪಾತ್ರೆ ಮತ್ತು ತಟ್ಟೆಗಳಲ್ಲಿ ಆಹಾರವನ್ನು ಕೊಂಡೊಯ್ಯಲು ಅನುಮತಿಸಲಾಗಿದೆ. ದ್ವೀಪದಿಂದ ಬಂಡೆಗಳ ಚೂರು ಮತ್ತು ಯಾವುದೇ ಚಿಪ್ಪುಗಳನ್ನು ಹೊರಗೆ
ಸಾಗಿಸುವುದನ್ನು ನಿರ್ಬಂಧಿಸಲಾಗಿದೆ.
ಸುರಕ್ಷತೆ ಮತ್ತು ನಿರ್ವಹಣೆ
ಪ್ರವಾಸಿಗರ ಸುರಕ್ಷತೆ ಹಾಗೂ ತಾಣದ ನಿರ್ವಹಣೆಗಾಗಿ ಎಂಟು ಜೀವರಕ್ಷಕ ಸಿಬ್ಬಂದಿಗಳು, ಇಬ್ಬರು ಸ್ವಚ್ಚತಾ ಸಿಬ್ಬಂದಿ, ಓರ್ವ ಶೌಚಾಲಯ ನಿರ್ವಾಹಕ, ಎರಡು ಮೇಲ್ವಿಚಾರಕರು ಇದ್ದು, ಏಳು ಆಹಾರ ಮಳಿಗೆಗಳು, ಜಲ ಕ್ರೀಡೆಗಾಗಿ ಹತ್ತು ಸಿಬ್ಬಂದಿ ಮತ್ತು ಸ್ಮರಣಿಕೆ ಕಿಯೋಸ್ಕ್ ಗಳಲ್ಲಿ ಸಿಬ್ಬಂದಿಗಳಿದ್ದಾರೆ. ಮೂರು ಪ್ರವೇಶ ದ್ವಾರ ಮತ್ತು ಆರು ಮಾರ್ಗದರ್ಶಿ ಸೂಚಕಗಳಿವೆ. ನಿಯಮಿತವಾಗಿ ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನೂ ಕೈಗೊಳ್ಳಲಾಗುತ್ತಿದೆ.
ಜಲಕ್ರೀಡೆ
ಇಲ್ಲಿ ಜಲ ಕ್ರೀಡಾ ಚಟುವಟಿಕೆಗಳಾದ ಜೆಟ್‍ಸ್ಕೀ, ಸ್ನೋರ್ಕೆಲ್ಲಿಂಗ್, ಕಯಾಕ್, ಕ್ಲಿಫ್ ಡೈವ್, ಸ್ಕೂಬಾ ಡೈವ್, ಪ್ಯಾರಾಸೈಲಿಂಗ್, ಬನಾನಾ ರೈಡ್, ಐಲ್ಯಾಂಡ್ ರೌಂಡಿಂಗ್, ಡಾಲ್ಫಿನ್ ಸೈಟ್, ಆಂಗ್ಲಿಂಗ್, ಎಸ್‍ಯುಪಿ, ಈಜು ವ್ಯವಸ್ಥೆ ಇದ್ದು, ವಿಶಾಂತಿಗಾಗಿ ಛತ್ರಿ ಕುರ್ಚಿ ಮತ್ತು ಚಾಪೆ ವ್ಯವಸ್ಥೆಯೂ ಇದೆ.