ಕ್ಯಾಲಿಫೋರ್ನಿಯಾ: ಎಂಟು ತಿಂಗಳ ಮಗು, ಆಕೆಯ ಪೋಷಕರಾದ ಜಸ್ಲೀನ್ ಕೌರ್, ಎಂ ಜಸ್ದೀಪ್ ಸಿಂಗ್ ಮತ್ತು ಚಿಕ್ಕಪ್ಪ ಅಮನದೀಪ್ ಸಿಂಗ್ ಸೋಮವಾರದಿಂದ ನಾಪತ್ತೆಯಾಗಿದ್ದರು. ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಅವರನ್ನು ಟ್ರಕ್‌ನೊಳಗೆ ಬಲವಂತವಾಗಿ ತುರುಕಿ ಕರೆದೊಯ್ಯುವುದು ಕಣ್ಗಾವಲು ದೃಶ್ಯಾವಳಿಗಳಲ್ಲಿ ದಾಖಲಾಗಿತ್ತು. ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಿಂದ ಇವರನ್ನು ಅಪಹರಿಸಲಾಗಿದ್ದು, ಈ ನಾಲ್ಕೂ ಜನ ಶವವಾಗಿ ಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಗುರುವಾರ ದೃಢಪಡಿಸಿದ್ದಾರೆ.
ಅಪಹರಣದ ಪ್ರಕರಣಕ್ಕೆ ಸಂಬಂಧಿಸಿದಂತೆ 48 ವರ್ಷದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. “ಇದು ಭಯಾನಕ ಮತ್ತು ಪ್ರಜ್ಞಾಶೂನ್ಯವಾಗಿದೆ”ಎಂದು ಮರ್ಸಿಡ್ ಕೌಂಟಿ ಪೊಲೀಸ್ ವರ್ನ್ ವಾರ್ನ್ಕೆ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಸಿಎನ್‌ಎನ್ ಉಲ್ಲೇಖಿಸಿದೆ. ವರದಿಗಳ ಪ್ರಕಾರ, ಬಂಧನಕ್ಕೊಳಗಾದ ವ್ಯಕ್ತಿಯನ್ನು ಕಣ್ಗಾವಲು ವೀಡಿಯೊದಲ್ಲಿ ಗುರುತಿಸಲಾಗಿದೆ. ವೀಡಿಯೊದಲ್ಲಿ, ವ್ಯಕ್ತಿ ಕುಟುಂಬವನ್ನು ಬಲವಂತವಾಗಿ ಟ್ರಕ್‌ಗೆ ಹತ್ತಿಸುತ್ತಿರುವುದನ್ನು ಕಾಣಬಹುದು ಎನ್ನಲಾಗಿದೆ.
2005 ರಲ್ಲಿ ಸಶಸ್ತ್ರ ದರೋಡೆ ಮತ್ತು ಸುಳ್ಳು ಸೆರೆವಾಸವನ್ನು ಒಳಗೊಂಡ ಪ್ರಕರಣದಲ್ಲಿ ತಪ್ಪಿತಸ್ಥನಾಗಿದ್ದ ವ್ಯಕ್ತಿಯು ಈ ಕೃತ್ಯ ನಡೆಸಿದ್ದಾನೆ. ಆದರೆ ಅವನು ಒಬ್ಬನೇ ಈ ಕೃತ್ಯ ಮಾಡಿರುವುದು ಅಸಂಭವ ಎಂದು ವೆರ್ನ್ ವಾರ್ನ್ಕೆ ಹೇಳಿದ್ದಾರೆ.
ತಮ್ಮ ಟ್ರಕ್ ಬಿಸಿನೆಸ್ ನಲ್ಲಿದ್ದ ಜಸ್ದೀಪ್ ಮತ್ತು ಅಮನದೀಪ್ ಅವರ ಬಳಿಗೆ ಬಂದ ವ್ಯಕ್ತಿಯೊಬ್ಬ ಬಂದೂಕು ತೋರಿಸಿ ಅವರನ್ನು ಬೆದರಿಸಿ, ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿದ್ದಾನೆ. ನಂತರ ಬಂದೂಕುಧಾರಿ ಒಳಗೆ ಪ್ರವೇಶಿಸಿ ಮಗುವನ್ನು ಹಿಡಿದುಕೊಂಡಿದ್ದ ಜಸ್ಲೀನ್‌ನನ್ನು ಕರೆದೊಯ್ಯುತ್ತಿರುವುದು ದೃಶ್ಯಾವಳಿಯಲ್ಲಿ ದಾಖಲಾಗಿದೆ.
ಸೋಮವಾರ ರಸ್ತೆಯೊಂದರಲ್ಲಿ ರೈತರೊಬ್ಬರು ಸಂತ್ರಸ್ತರ ಎರಡು ಸೆಲ್ ಫೋನ್‌ಗಳನ್ನು ಕಂಡುಕೊಂಡು ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಸ್ದೀಪ್ ಮತ್ತು ಅಮನದೀಪ್ ಪೋಷಕರಾದ ಡಾ ರಣಧೀರ್ ಸಿಂಗ್ ಮತ್ತು ಕಿರ್ಪಾಲ್ ಕೌರ್ ಪಂಜಾಬಿನ ಹೋಶಿಯಾರ್‌ಪುರದ ಹರ್ಸಿ ಪಿಂಡ್ ಗ್ರಾಮದವರು.