ನಿಟ್ಟೆ: ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರಂತಹ ಮಹಾನ್ ನಾಯಕರು ಹಾಕಿ ಕೊಟ್ಟ ಅಹಿಂಸಾ ಮಾರ್ಗ ಹಾಗೂ ಅವರ ಜೀವನ ಶೈಲಿಯು ಇಂದಿನ ಯುವಕರಿಗೆ ಸ್ಫೂರ್ತಿದಾಯಕವಾಗಿದೆ ಎಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಅಭಿಪ್ರಾಯಪಟ್ಟರು.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಭಾನುವಾರದಂದು ಆಯೋಜಿಸಿದ್ದ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ ಜಯಂತಿ ಸಮಾರಂಭ ಹಾಗೂ ಅದರ ಅಂಗವಾಗಿ ಸ್ವಚ್ಛ ಭಾರತ್ ಅಭಿಯಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅತಿಥಿಯಾಗಿ ಆಗಮಿಸಿದ್ದ ಉಪಪ್ರಾಂಶುಪಾಲ ಡಾ.ಐ ರಮೇಶ್ ಮಿತ್ತಂತಾಯ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ಕ್ಯಾಂಪಸ್ ನ ಮೈಂಟೆನೆನ್ಸ್ ಮತ್ತು ಡೆವಲಪ್ಮೆಂಟ್ ವಿಭಾಗದ ನಿರ್ದೇಶಕ ಯೋಗೀಶ್ ಹೆಗ್ಡೆ, ಗಾಂಧೀಜಿಯವರ ತತ್ವಾದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. 2014 ರಿಂದೀಚೆಗೆ ಸ್ವಚ್ಛ ಭಾರತ ಅಭಿಯಾನದ ಮೂಲಕ ಸಾರ್ವಜನಿಕರಲ್ಲಿ ಕಸವಿಲೇವಾರಿ ಬಗ್ಗೆ ಮತ್ತು ತ್ಯಾಜ್ಯವನ್ನು ನಿರ್ವಹಿಸುವ ಬಗ್ಗೆ ಅರಿವು ಮೂಡಿರುವುದರಿಂದ ಸಮಾಜವು ಪರಿವರ್ತನೆಯತ್ತ ಹೆಜ್ಜೆ ಹಾಕಿರುವುದು ಶ್ಲಾಘನೀಯ ಎಂದರು.
ನಿಟ್ಟೆ ವಿದ್ಯಾಸಂಸ್ಥೆಯ ಬಾಲಕರ ವಿದ್ಯಾರ್ಥಿನಿಲಯದ ಚೀಫ್ ವಾರ್ಡನ್ ಡಾ.ವಿಶ್ವನಾಥ ಸ್ವಾಗತಿಸಿದರು. ಕ್ಯಾಂಪಸ್ ನ ರೆಸಿಡೆಂಟ್ ಇಂಜಿನಿಯರ್ ಡಾ.ಶ್ರೀನಾಥ್ ಶೆಟ್ಟಿ ವಂದಿಸಿದರು. ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೃಷ್ಣರಾಜ ಜೋಯಿಸ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನಿಟ್ಟೆ ತಾಂತ್ರಿಕ ಕಾಲೇಜಿನ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿಟ್ಟೆ ಕಾಲೇಜ್ ಕ್ಯಾಂಪಸ್ ನ ಸುತ್ತಮುತ್ತ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು.