ಉಡುಪಿ: ನಗರದ ಬ್ರಹ್ಮಗಿರಿ ವೃತ್ತಕ್ಕೆ ಸಾವರ್ಕರ್ ವೃತ್ತ ಎಂದು ನಾಮಕರಣ ಮಾಡುವ ಬಗ್ಗೆ ಯಶ್ ಪಾಲ್ ಸುವರ್ಣ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ನಗರಸಭೆಗೆ ಮನವಿ ಮಾಡಲಾಗಿದೆ. ನಗರಸಭೆಯಿಂದ ಈ ವೃತ್ತಕ್ಕೆ ಆಸ್ಕರ್ ಫೆರ್ನಾಂಡೀಸ್ ವೃತ್ತವೆಂದು ನಾಮಕರಣ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾಗಿರುವ ಮಾಹಿತಿ ದೊರೆತಿದೆ. ಆದರೆ ಈ ಹಿಂದೆ ತೀರ್ಮಾನವಾದಂತೆ ಈ ವೃತ್ತಕ್ಕೆ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಹೆಸರು ಇಡಬೇಕು. ಯಾವುದೇ ತೀರ್ಮಾನ ತೆಗೆದುಕೊಂಡಾಗ ತಕ್ಷಣಕ್ಕೆ ವಾಪಸ್ ಪಡೆಯುವುದು ಸಾಧ್ಯವಿಲ್ಲ, ಆದರೂ ಕ್ಷೇತ್ರದ ಶಾಸಕರು ಮತ್ತು ನಗರಸಭೆಯ ಗಮನಕ್ಕೆ ತರುತ್ತೇವೆ. ಕಾನೂನುಬದ್ಧವಾಗಿ ಮಾಡಿದ ನಿರ್ಣಯವನ್ನು ವಾಪಾಸ್ ಪಡೆದು ಪುನಃ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದಿದ್ದಾರೆ.
ಈ ಮಧ್ಯೆ ಹಳೇ ತಾಲೂಕು ಕಚೇರಿ ಮುಂಭಾಗದ ವೃತ್ತಕ್ಕೆ ಸಾವರ್ಕರ್ ಹೆಸರಿಡುವ ಬಗ್ಗೆಯೂ ಚರ್ಚೆಗಳಾಗುತ್ತಿವೆ. ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ರಘುಪತಿ ಭಟ್ ಈ ವಿಷಯವಾಗಿ ಯಶ್ ಪಾಲ್ ಜೊತೆ ಚರ್ಚಿಸಿ ಮನವೊಲಿಸುತ್ತೇನೆ ಎಂದಿದ್ದಾರೆ ಎಂದು ನ್ಯೂಸ್ 18 ಕನ್ನಡ ವರದಿ ಮಾಡಿದೆ.