ಬ್ರಹ್ಮಾವರ: ಮೂರ್ತೆದಾರರ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಬ್ರಹ್ಮಾವರ: ಇಲ್ಲಿನ ಮೂರ್ತೆದಾರರ ಸೇವಾ ಸಹಕಾರಿ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಶಂಕರ ಪೂಜಾರಿ ಕುಕ್ಕುಡೆ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಎನ್ ಕರ್ಕೇರಾ ಲೆಕ್ಕ ಪರಿಶೋಧನೆ ನಡೆಸಲಾದ ಆರ್ಥಿಕ ತಃಖ್ತೆಗಳು, ಅನುಪಾಲನಾ ವರದಿ, ಲಾಭಾಂಶ ವಿಂಗಡನೆ, ಬಜೆಟ್‌ ಮತ್ತು ಖರ್ಚು, 2021-22 ಸಾಲಿನ ಆಯ-ವ್ಯಯ ಪಟ್ಟಿ, ಹಾಗೂ 2022-23 ಸಾಲಿನ ಕಾರ್ಯಚಟುವಟಿಕೆ ಗಳನ್ನು ಮಂಡಿಸಿ ಸರ್ವಾನುಮತದಿಂದ ಅನುಮೋದನೆ ಪಡೆದುಕೊಂಡರು.

ಸಂಘದ ಅಧ್ಯಕ್ಷ ಶಂಕರ ಪೂಜಾರಿ ಕುಕ್ಕುಡೆ ಪ್ರಸ್ತಾವಿಸಿ ವರದಿ ಮಂಡಿಸಿ 12% ಡಿವಿಡೆಂಡ್ ಪಾವತಿಗೆ ಮಂಜೂರಾತಿ ಪಡೆದರು. ಸಂಘದ “ಅ” ತರಗತಿ ಸದಸ್ಯರ 270 ಮಕ್ಕಳಿಗೆ ಒಟ್ಟು ರೂಪಾಯಿ 3.66 ಲಕ್ಷ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಂಘದ ನಿರ್ದೇಶಕರ ಮಗ ನವೀನ್ ಪೂಜಾರಿ ಇವರು ಎಂಜಿನಿಯರಿಂಗ್‌ನಲ್ಲಿ ಕಾಲೇಜಿಗೆ 10ನೇ ರ‍್ಯಾಂಕ್ ಬಂದಿದ್ದು, ಮಹಾಸಭೆಯಲ್ಲಿ ಇವರನ್ನು ಸನ್ಮಾನಿಸಲಾಯಿತು.

ಸಂಘವು 2021-22 ನೇ ಸಾಲಿನಲ್ಲಿ 4210,758.91 ಲಕ್ಷ ಲಾಭಗಳಿಸಿದ್ದು, ಸುಮಾರು 2595.46 ಲಕ್ಷ ಠೇವಣಿ ಸಂಗ್ರಹಿಸಿ, 2284.40 ಲಕ್ಷ ಸಾಲ ಹೊರಬಾಕಿ ಇದೆ. ಒಟ್ಟು ವ್ಯವಹಾರ 113.8 ಕೋಟಿ ರೂಪಾಯಿ ಆಗಿದ್ದು, ದುಡಿಯುವ ಬಂಡವಾಳ 2900.00 ಲಕ್ಷ ಇರುತ್ತದೆ. ಸಂಘವು ಬ್ರಹ್ಮಾವರ ಆಕಾಶವಾಣಿ ಸಮೀಪದ ಶೇಷಗೋಪಿ ಪ್ಯಾರಡೈಸ್ ಬಿಲ್ಡಿಂಗ್ ಪ್ರಥಮ ಮಹಡಿಯಲ್ಲಿ ಸುಸಜ್ಜಿತ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕುಂಜಾಲು, ಸಂತೆಕಟ್ಟೆ, ಕಟಪಾಡಿ ಶಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

ಅಧ್ಯಕ್ಷ ಶಂಕರ ಪೂಜಾರಿ ಕುಕ್ಕುಡೆ, ಸಂಘದ ಬೆಳವಣಿಗೆಗಾಗಿ ಸಹಕರಿಸಿ ಪೋತ್ಸಾಹಿಸಿದ ಎಲ್ಲಾ ನಿರ್ದೇಶಕರನ್ನು, ಸದಸ್ಯರನ್ನು, ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು.

ಉಪಾಧ್ಯಕ್ಷ ವಿಠಲ ಪೂಜಾರಿ ಹೆರಂಜೆ, ನಿರ್ದೇಶಕ ಅಚ್ಚುತ ಕೋಟ್ಯಾನ್ ಹೇರೂರು, ಕೃಷ್ಣ ಪೂಜಾರಿ ಅಮ್ಮುಂಜೆ, ಉಮೇಶ್ ಪೂಜಾರಿ ಬೆಳ್ಮಾರು, , ನಾರಾಯಣ ಪೂಜಾರಿ ಉಗ್ಗೆಲ್‌ಬೆಟ್ಟು ಉಪಸ್ಥಿತರಿದ್ದರು.

ಸಂಘದ ನಿರ್ದೇಶಕ ವಿಠಲ ಪೂಜಾರಿ ಮಟಪಾಡಿ ಸ್ವಾಗತಿಸಿದರು, ನಿರ್ದೇಶಕರಾದ ಸತೀಶ್ ಪೂಜಾರಿ ಉಗ್ಗೆಲ್‌ಬೆಟ್ಟು ವಂದಿಸಿದರು. ಕುಮಾರಿ ಪ್ರತಿಜ್ಞಾ ಪ್ರಾರ್ಥಿಸಿದರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಎನ್ ಕರ್ಕೇರಾ ಕಾರ್ಯಕ್ರಮ ನಿರೂಪಿಸಿದರು.