ಮಣಿಪಾಲ: ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯು ಸೆ.28 ರಂದು ತನ್ನ 16 ನೇ ವಿಶ್ವ ರೇಬೀಸ್ ದಿನದ ಆಚರಣೆಯ ಅಂಗವಾಗಿ ವೆಬಿನಾರ್ ಒಂದನ್ನು ಆಯೋಜಿಸಿತ್ತು. ಮೊದಲ ರೇಬೀಸ್ ಲಸಿಕೆ ಅಭಿವೃದ್ಧಿ ಪಡಿಸಿದ ಮತ್ತು ಪ್ರಪಂಚದಾದ್ಯಂತ ರೋಗದ ಬಗ್ಗೆ ಜಾಗೃತಿ ಮೂಡಿಸಿದ ಮೈಕ್ರೋಬಯಾಲಜಿಯ ಪಿತಾಮಹ ಲೂಯಿಸ್ ಪಾಶ್ಚರ್ ಅವರ ಪುಣ್ಯತಿಥಿಯ ಅಂಗವಾಗಿ ಅವರ ಕೊಡುಗೆಗಳನ್ನು ಸ್ಮರಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿಯ ರೇಬೀಸ್ ಘೋಷವಾಕ್ಯ ‘ಏಕ ಆರೋಗ್ಯ ಶೂನ್ಯ ಸಾವು’ ಎಂಬುದರ ಮೇಲೆ ಆಧಾರಿತವಾಗಿದ್ದು, 2030 ರ ವೇಳೆಗೆ ರೋಗವನ್ನು ತೊಡೆದುಹಾಕಲು ಬಹುವಲಯದ ವಿಧಾನಗಳಿಗೆ ಒತ್ತು ನೀಡುತ್ತಿದೆ.
ಮಾಹೆ ಆರೋಗ್ಯ ವಿಜ್ಞಾನದ ವೈಸ್ ಚಾನ್ಸೆಲರ್ ಪ್ರೊ ಡಾ. ವೆಂಕಟರಾಯ ಎಂ ಪ್ರಭು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರೇಬೀಸ್ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ಮೂಲನೆ ಗಾಗಿ ದೇಶದಾದ್ಯಂತದ ಪ್ರಖ್ಯಾತ ವಿಜ್ಞಾನಿಗಳು ಮತ್ತು ವೈದ್ಯರು ನೀಡಿದ ನಾಲ್ಕು ಪ್ರಸ್ತುತಿಗಳನ್ನು ವೆಬಿನಾರ್ ಒಳಗೊಂಡಿತ್ತು. ವಿಶೇಷವಾಗಿ ಗ್ರಾಮೀಣ ಮತ್ತು ಕಡೆಗಣಿಸಲಾದ ಸಮುದಾಯಗಳ ಮೇಲೆ ರೋಗವು ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಅವರು ವಿವರಿಸಿದರು. ಭಾರತದಲ್ಲಿ ರೇಬೀಸ್ ನಿರ್ಮೂಲನೆಗೆ ಅಳವಡಿಸಿಕೊಳ್ಳಬಹುದಾದ ತಂತ್ರಗಳು ಬಗ್ಗೆ ತಜ್ಞರು ತಮ್ಮ ಅಭಿಪ್ರಾಯ ಮಂಡಿಸಿದರು.
ಡಾ.ಡಿ.ಎಚ್.ಅಶ್ವಥ್ ನಾರಾಯಣ, ಕೆಂಪೇಗೌಡ ಸಮುದಾಯ ವೈದ್ಯ ವಿಭಾಗದ ಪ್ರಾಧ್ಯಾಪಕ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಬೆಂಗಳೂರು, ಡಾ. ಅಬಿ ಮನೇಶ್, ಸಹ ವೈದ್ಯ ಗ್ರೇಡ್ II ಸಾಂಕ್ರಾಮಿಕ ರೋಗಗಳ ಸಂಶೋಧನೆ ಮತ್ತು ತರಬೇತಿ ಕೇಂದ್ರ , ಸಾಂಕ್ರಾಮಿಕ ರೋಗಗಳ ಇಲಾಖೆ, ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು, ವೆಲ್ಲೂರು, ಡಾ. ಅಶ್ವಿನಿ ಎಂ ಎ, ಹಿರಿಯ ವೈಜ್ಞಾನಿಕ ಅಧಿಕಾರಿ, ನಿಮ್ಹಾನ್ಸ್, ಬೆಂಗಳೂರು, ಡಾ. ರವೀಶ್ ಎಚ್.ಎಸ್. ಕೆಂಪೇಗೌಡ ಸಮುದಾಯ ವೈದ್ಯ ವಿಭಾಗದ ಪ್ರಾಧ್ಯಾಪಕ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಬೆಂಗಳೂರು ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಮಣಿಪಾಲ ವೈರಾಲಜಿ ಸಂಸ್ಥೆಯ ನಿರ್ದೇಶಕ ಡಾ.ಚಿರಂಜಯ್ ಮುಖೋಪಾಧ್ಯಾಯ ಉಪಸ್ಥಿತರಿದ್ದರು.
ಮಾಹೆಯ ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ವಾಂಸರು ಈ ವರ್ಷದ ವಿಶ್ವ ರೇಬೀಸ್ ದಿನದ ವಿಷಯವನ್ನು ಆಧರಿಸಿದ ಕೊಲಾಜ್ ಸ್ಪರ್ಧೆಯಲ್ಲಿ ಭಾಗವಹಿಸಿದರು. ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥೆ ಡಾ. ವಂದನಾ ಕೆ ಇ ತೀರ್ಪುಗಾರರಾಗಿದ್ದರು.