ಹಿಂದೂ ಸಮಾಜದ ಒಗ್ಗಟ್ಟು ಮತ್ತು ಧರ್ಮ ಜಾಗೃತಿಗಾಗಿ ದುರ್ಗಾದೌಡ್: ಸುನಿಲ್ ಕುಮಾರ್

ಕಾರ್ಕಳ: ಅ.2 ರಂದು ಜಿಲ್ಲೆಯಲ್ಲಿ ದುರ್ಗಾ ದೌಡ್ ಆಯೋಜಿಸಲಾಗಿದ್ದು, ಅದರ ಪೂರ್ವಾಭಾವಿ ಸಭೆ ಸೆ.25 ರಂದು ಕಾರ್ಕಳದ ಗಾಂಧಿ ಮೈದಾನದ ಬಳಿ ಇರುವ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದಲ್ಲಿ ಜರುಗಿತು.

ದೇಶದಲ್ಲಿ ಪ್ರಸಕ್ತ ವಾತಾವರಣವನ್ನು ಗಮನಿಸಿದಾಗ ಹಿಂದೂ ಸಮಾಜವು ಒಗ್ಗಟ್ಟಿನೊಂದಿಗೆ ಜಾಗೃತ ಸಮಾಜವನ್ನು ರೂಪಿಸುವ ಅಗತ್ಯವಿದೆ. ದೇಶ ವಿರೋಧೀ ಸಂಘಟನೆಗಳು ವಿಧ್ವಂಸ ಕೃತ್ಯದಲ್ಲಿ ತೊಡಗಿದ್ದು, ತನಿಖೆಯಿಂದ ಸತ್ಯ ಬಯಲಾಗುತ್ತಿದೆ. ಇಂತಹ ವಿಷಮ ಸನ್ನಿವೇಶದಲ್ಲಿ ಧರ್ಮ ಜಾಗೃತಿಯ ಸಂಕೇತವಾಗಿ ಅ.2 ರಂದು ದುರ್ಗಾ ದೌಡ್ ಅನ್ನು ಆಯೋಜಿಸಲಾಗುತ್ತಿದೆ ಎಂದು ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಹಿಂದೂ ಜಾಗರಣ ವೇದಿಕೆಯ ಪ್ರಾಂತ ಪ್ರಮುಕ್ ಪ್ರಕಾಶ್ ಕುಕ್ಕೆಹಳ್ಳಿ ಮಾತನಾಡಿ, ನವರಾತ್ರಿಯ ದುರ್ಗೆಯ ಆರಾಧನಾ ಪರ್ವಕಾಲದಲ್ಲಿ, ಶಕ್ತಿಯ ಸಂಕೇತವಾದ ದುರ್ಗೆಯು ಧರ್ಮ ರಕ್ಷಣೆಗಾಗಿ ಪ್ರತಿ ಮನೆಯಲ್ಲೂ ಸಂಕಲ್ಪಗೊಳ್ಳಬೇಕು. ಈ ನಿಟ್ಟಿನಲ್ಲಿ ದುರ್ಗಾ ದೌಡ್ ಅನ್ನು ಆಯೋಜಿಸಲಾಗುತ್ತಿದ್ದು, ಮುಂದಿನ ಪೀಳಿಗೆಯ ರಕ್ಷಣೆಗೆ ಸುಭದ್ರ ಅಡಿಪಾಯ ಹಾಕುವ ಅವಶ್ಯಕತೆ ಇದೆ ಎಂದರು.

ಹಿಂದೂ ಜಾಗರಣ ವೇದಿಕೆಯ ಕಾರ್ಯದರ್ಶಿ ಗುರುಪ್ರಸಾದ್ ನಾರಾವಿ ಸ್ವಾಗತಿಸಿ, ಜಿಲ್ಲಾ ಪ್ರಮುಖ್ ರಮೇಶ್ ಕಲ್ಲೊಟ್ಟೆ ನಿರೂಪಿಸಿದರು.