ಒಣ ಕಸದಿಂದ ಆಟಿಕೆಗಳನ್ನು ತಯಾರಿಸುವ ವಿಶಿಷ್ಟ ಸ್ಪರ್ಧೆ: ಸ್ವಚ್ಛ ಟಾಯ್‌ಕಥಾನ್

ನವದೆಹಲಿ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಕಸದಿಂದ ರಸ ಪರಿಕಲ್ಪನೆಯ ‘ಸ್ವಚ್ಛ ಟಾಯ್‌ಕಥಾನ್’ ಅನ್ನು ಸೋಮವಾರದಿಂದ ಪ್ರಾರಂಭಿಸಲಿದ್ದು, ಇದು ತ್ಯಾಜ್ಯದಿಂದ ಆಟಿಕೆಗಳನ್ನು ತಯಾರಿಸುವ ವಿಶಿಷ್ಟ ಸ್ಪರ್ಧೆಯಾಗಿದೆ. ಒಣ ತ್ಯಾಜ್ಯವನ್ನು ಬಳಸಿಕೊಂಡು ಆಟಿಕೆ ವಿನ್ಯಾಸಗಳಲ್ಲಿ ಹೊಸತನವನ್ನು ಹೊರತರಲು ಸ್ಪರ್ಧೆಯು ವ್ಯಕ್ತಿಗಳು ಮತ್ತು ಗುಂಪುಗಳಿಗೆ ಮುಕ್ತವಾಗಿರುತ್ತದೆ. ಒಣ ಕಸದಿಂದ ಆಟಿಕೆಗಳನ್ನು ತಯಾರಿಸುವ ವ್ಯಕ್ತಿ ಅಥವಾ ಸಂಸ್ಥೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸಮರ್ಥ ವಿನ್ಯಾಸಗಳು ಮತ್ತು ಕನಿಷ್ಠ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವ ಆಟಿಕೆಗಳ ಮೇಲೆ ಸ್ಪರ್ಧೆಯು ಗಮನ ಕೇಂದ್ರೀಕರಿಸಿದೆ. ಈ ರೀತಿ ತಯಾರಾದ ಆಟಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಸ್ಪರ್ಧೆಯನ್ನು ಮೈಗವರ್ನಮೆಂಟ್ ನ ಇನ್ನೋವೇಟ್ ಇಂಡಿಯಾ ಪೋರ್ಟಲ್‌ನಲ್ಲಿ ಆಯೋಜಿಸಲಾಗುತ್ತದೆ. ಸೆಂಟರ್ ಫಾರ್ ಕ್ರಿಯೇಟಿವ್ ಲರ್ನಿಂಗ್, ಐಐಟಿ ಗಾಂಧಿನಗರ ಈ ಉಪಕ್ರಮಕ್ಕೆ ಕಲಿಕಾ ಪಾಲುದಾರನಾಗಿದೆ.

ಬಲವಾದ ಆರ್ಥಿಕ ಬೆಳವಣಿಗೆ, ಹೆಚ್ಚುತ್ತಿರುವ ಉಳಿತಾಯ ಮತ್ತು ಪುಟಾಣಿ ಜನಸಂಖ್ಯೆಗಾಗಿ ನಡೆಯುತ್ತಿರುವ ಹಲವಾರು ಆವಿಷ್ಕಾರಗಳಿಂದಾಗಿ ದೇಶದಲ್ಲಿ ಆಟಿಕೆಗಳ ಬೇಡಿಕೆ ಹೆಚ್ಚುತ್ತಿದೆ. ಭಾರತವನ್ನು ಜಾಗತಿಕ ಆಟಿಕೆ ಕೇಂದ್ರವಾಗಿ ಸ್ಥಾಪಿಸುವ ಉದ್ದೇಶದಿಂದ ಸಾಂಪ್ರದಾಯಿಕ ಕರಕುಶಲ ಮತ್ತು ಕೈಯಿಂದ ಮಾಡಿದ ಆಟಿಕೆಗಳು ಸೇರಿದಂತೆ ಭಾರತೀಯ ಆಟಿಕೆ ಉದ್ಯಮವನ್ನು ಉತ್ತೇಜಿಸಲು ಆಟಿಕೆಗಳಿಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ 2020 ಅನ್ನು ಪರಿಚಯಿಸಲಾಯಿತು. ಕೇಂದ್ರ ಸರ್ಕಾರದ 14 ಸಚಿವಾಲಯಗಳೊಂದಿಗೆ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯು ಪ್ರಸ್ತುತ ಆಟಿಕೆಗಳಿಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಯ ವಿವಿಧ ಅಂಶಗಳನ್ನು ಅನುಷ್ಠಾನಗೊಳಿಸುತ್ತಿದೆ. ಆಟಿಕೆಗಳು ಮಕ್ಕಳ ಬೌದ್ಧಿಕ ವಿಕಾಸದಲ್ಲಿ ಕೊಡುಗೆ ನೀಡುತ್ತವೆ.

ಭಾರತದಲ್ಲಿ ದೊರೆಯುತ್ತಿರುವ ಹಲವಾರು ಆಟಿಕೆಗಳು ವಿದೇಶೀ ಮೂಲದ್ದಾಗಿದ್ದು, ದೇಶದ ಬಹುಪಾಲು ಹಣ ಈ ವಿದೇಶೀ ಕಂಪನಿಗಳಿಗೆ ಸಂದಾಯವಾಗುತ್ತಿದೆ. ಆಟಿಕೆಗಳ ಜಾಗತಿಕ ಮಾರುಕಟ್ಟೆ ಆದಾಯವು 2019 ರಲ್ಲಿ 92.2 ಬಿಲಿಯನ್ ಡಾಲರ್ ಆಗಿದ್ದು, 2027 ರಲ್ಲಿ 103.8 ಬಿಲಿಯನ್ ಡಾಲರ್ ತಲುಪಲಿದೆ ಎಂದು ಅಂದಾಜಿಸಲಾಗಿದೆ.