ಚೆನ್ನೈ: ಚೆನ್ನೈನ ಹೊರವಲಯದಲ್ಲಿರುವ ಓರಗಡಂನಲ್ಲಿ ಕಲ್ಲಿನ ಉಪಕರಣಗಳನ್ನು ತಯಾರಿಸಲಾಗುತ್ತಿದ್ದ ಪ್ರಾಚೀನ ಸ್ಥಳವನ್ನು ಭಾರತೀಯ ಪುರಾತತ್ವ ಇಲಾಖೆಯು ಉತ್ಖನನ ಮಾಡಿದೆ. ಈ ಪ್ರದೇಶದಲ್ಲಿ ದೊರೆತ ಕಲಾಕೃತಿಗಳು 12000 ವರ್ಷ ಪುರಾತನವಾಗಿದ್ದಿರಬೇಕೆಂದು ಪುರಾತತ್ವ ಇಲಾಖೆಯು ಅನುಮಾನ ವ್ಯಕ್ತಪಡಿಸಿವೆ. ಇಲ್ಲಿ ಅಗೆತ ಮಾಡಿದ ಒಂದೇ ಸ್ಥಳದಲ್ಲಿ ಸಾವಿರಾರು ವರ್ಷಗಳಿಂದ ಕನಿಷ್ಠ ನಾಲ್ಕು ಪ್ರತ್ಯೇಕ ನಾಗರಿಕತೆಗಳು ವಾಸವಾಗಿರುವ ಪುರಾವೆ ದೊರೆತಿದೆ.
ವಡಕ್ಕುಪಟ್ಟು ಗ್ರಾಮದಲ್ಲಿ ನಡೆಸಿದ ಉತ್ಖನನದಲ್ಲಿ ಮೆಸೊಲಿಥಿಕ್ ಅವಧಿಯ ಕೈಗೊಡಲಿಗಳು, ಉಜ್ಜುಗಗಳು, ಸೀಳುವ ಮತ್ತು ಕತ್ತರಿಸುವ ಉಪಕರಣಗಳು ದೊರೆತಿವೆ. ಇವುಗಳೆಲ್ಲವೂ ಭೂಮಿಯ ಮೇಲ್ಮೈಯಿಂದ ಕೇವಲ 75 ಸೆಂ.ಮೀ ಕೆಳಗೆ ಕಂಡುಬಂದಿವೆ. ಇಲ್ಲಿನ ಸ್ಥಿತಿಯನ್ನು ಅವಲೋಕಿಸಿದಾಗ ಬೇಟೆಗಾರರಿಗೆ ಕಲ್ಲಿನ ಉಪಕರಣಗಳನ್ನು ತಯಾರಿಸುವ ಪ್ರದೇಶ ಇದಾಗಿತ್ತು ಎನ್ನುವ ಅನುಮಾನ ವ್ಯಕ್ತವಾಗುತ್ತದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಪುರಾತತ್ವಶಾಸ್ತ್ರಜ್ಞ ಎಂ ಕಾಳಿಮುತ್ತು ಹೇಳುತ್ತಾರೆ.
10m*10m ಗುಂಡಿಯ ಒಂದೇ ಜಾಗದಲ್ಲಿ 12000 ವರ್ಷಗಳಷ್ಟು ಪುರಾತನ ಕಲ್ಲಿನ ಉಪಕರಣಗಳು, 2000 ವರ್ಷ ಪ್ರಾಚೀನ ಸಂಗಮ ಕಾಲದ ಕಲಾಕೃತಿಗಳು ಮತ್ತು 1800-1200 ವರ್ಷಗಳ ಆರಂಭಿಕ ಮತ್ತು ಅಂತ್ಯದ ಪಲ್ಲವರ ಕಾಲದ ಕಲಾಕೃತಿಗಳು ದೊರೆತಿವೆ. ಸಂಗಮಕಾಲದ ರೋಮನ್ ಆಂಫೊರಾ ಎಳೆಗಳು ಮತ್ತು ಮಣಿಗಳು ಈ ಭಾಗದ ಜನರು ರೋಮನ್ನರ ಜೊತೆ ಹೊಂದಿದ್ದ ವ್ಯಾಪಾರ ವಹಿವಾಟಿನ ಕುರುಹನ್ನು ಅರುಹುತ್ತದೆ. ಪ್ರದೇಶವನ್ನು ಅಗೆಯುತ್ತಾ ಸಾಗಿದಂತೆ ಚಿನ್ನದ ಆಭರಣಗಳು, ಮಣಿಗಳು, ಮುರಿದ ಬಳೆಗಳು, ಮಡಕೆ ಚೂರುಗಳು, ನಾಣ್ಯಗಳು ಮತ್ತು ಟೆರಾಕೋಟಾ ಕಲಾಕೃತಿಗಳು ದೊರೆತಿವೆ. ಅಗೆತ ಆಳಕ್ಕಿಳದಾಂತೆಲ್ಲಾ, ಕಲ್ಲಿನ ಉಪಕರಣಗಳು ದೊರೆತಿವೆ. ಇವು ಕನಿಷ್ಠ 12000 ವರ್ಷಗಳಷ್ಟು ಹಿಂದಿನದಾಗಿದ್ದು, ಕಾರ್ಬನ್ ಡೇಟಿಂಗ್ ಮತ್ತು ಥರ್ಮೋಲುಮಿನೆಸೆನ್ಸ್ ಪರೀಕ್ಷೆಗಳಿಂದ ಇವುಗಳ ನಿಖರವಾದ ಕಾಲಾವಧಿಯನ್ನು ಹೇಳಬಹುದಾಗಿದೆ.
ಈ ಪ್ರದೇಶದಲ್ಲಿ ಸಾವಿರಾರು ವರ್ಷಗಳ ಜನವಸತಿಯ ನಿರಂತರತೆಯು ಪ್ರದೇಶವನ್ನು ಸಾಂಸ್ಕೃತಿಕ ಮತ್ತು ಪುರಾತತ್ವ ದೃಷ್ಟಿಯಿಂದ ಪ್ರಾಮುಖ್ಯವಾಗಿಸುತ್ತದೆ ಎಂದು ನಿವೃತ್ತ ಪುರಾತತ್ವ ಶಾಸ್ತ್ರಜ್ಞ ಕೆ ಶ್ರೀಧರನ್ ಹೇಳುತ್ತಾರೆ. ವಡಕ್ಕುಪಟ್ಟು ಗ್ರಾಮದಿಂದ ಒಂದು ಕಿ.ಮೀ ದೂರವಿರುವ ಗುರುವನಮೇಡು ಎಂಬಲ್ಲಿ ದೊರೆತ ಸಮಾಧಿಯೊಂದರ ಜಾಡಿನಲ್ಲಿ ಈ ಪ್ರದೇಶವನ್ನು ಉತ್ಖನನ ನಡೆಸಿದಾಗ ಕನಿಷ್ಠ ನಾಲ್ಕು ನಾಗರಿಕತೆಗಳು ಈ ಪ್ರದೇಶದಲ್ಲಿ ವಾಸವಾಗಿರುವುದು ಕಂಡುಬಂದಿದೆ.
ಭಾರತೀಯ ನೈಜ ಇತಿಹಾಸದ ದೃಷ್ಟಿಯಿಂದ ಇಂತಹ ಸಂಶೋಧನೆಗಳು ಬಹಳ ಪ್ರಾಮುಖ್ಯವನ್ನು ಪಡೆಯುತ್ತದೆ. ಆ ನಿಟ್ಟಿನಲ್ಲಿ ವಡಕುಪಟ್ಟು ಗ್ರಾಮವು ಮುನ್ನಲೆಗೆ ಬಂದಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿಚಾರಗಳು ತಿಳಿದುಬರಲಿವೆ.
ಕೃಪೆ: ಟೈಮ್ಸ್ ಆಫ್ ಇಂಡಿಯಾ
ಚಿತ್ರಗಳು: ಟೈಮ್ಸ್ ಆಫ್ ಇಂಡಿಯಾ