ಉಡುಪಿ: ಉಡುಪಿಯನ್ನು ಕಾರ್ಕಳಕ್ಕೆ ಸಂಪರ್ಕಿಸುವ ಮುಖ್ಯರಸ್ತೆ ಪರ್ಕಳದಿಂದ ಗುಡ್ಡೆಯಂಗಡಿವರೆಗಿನ ರಾಷ್ಟ್ರೀಯ ಹೆದ್ದಾರಿಯು ದುರವಸ್ಥೆಯಲ್ಲಿದ್ದು, ದುರಸ್ತಿ ಮಾಡಬೇಕಾದ ಸಂಸದೆ ಶೋಭಾ ಕರಂದ್ಲಾಜೆ ಅಡಗಿ ಕುಳಿತಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.
ಗುರುವಾರ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಉತ್ತರ ವಲಯದ ನೇತೃತ್ವದಲ್ಲಿ ರಾಷ್ಟೀಯ ಹೆದ್ದಾರಿಯನ್ನು ದುರಸ್ತಿಗೊಳಿಸುವಂತೆ ಕೋರಿ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ಬಿಜೆಪಿ ಸರ್ಕಾರದ ವಿರುದ್ದ ಧಿಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಹೆದ್ದಾರಿ ತಡೆ ನಡೆಸಿ ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಶೀಘ್ರವೆ ರಸ್ತೆ ದುರಸ್ತಿ ಮಾಡದಿದ್ದಲ್ಲಿ ಶಾಸಕ ಮತ್ತು ಸಂಸದರ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾ.ಹೆ ದುರವಸ್ಥೆಯಿಂದ ಜನರು ಪ್ರಾಣಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದರೂ ಜಿಲ್ಲೆಯ ಸಂಸದೆ ಪತ್ತೆಯಿಲ್ಲ, ಸಂಸದೆಯನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೆ ದೂರು ನೀಡಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಸೊರಕೆ ಹೇಳಿದರು.
ಈ ಸಂದರ್ಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಉತ್ತರ ವಲಯದ ಮುಖಂಡರಾದ ಚರಣ್ ವಿಠ್ಠಲ್ ಕುದಿ, ಇಸ್ಮಾಯಿಲ್ ಆತ್ರಾಡಿ, ಶಶಿಧರ್ ಜತ್ತನ್ನ, ಉಮೇಶ್ ಕಾಂಚನ್, ಲಕ್ಷ್ಮೀ ನಾರಾಯಣ್ ಪ್ರಭು, ಗುರುದಾಸ್ ಭಂಡಾರಿ, ದಿಲೀಪ್ ಹೆಗ್ಡೆ, ಕಿರಣ್ ಹೆಗ್ಡೆ, ಸಂತೋಷ್ ಶೆಟ್ಟಿ, ಸೌರಭ್ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.