ಕಾರ್ಕಳ: ಇಲ್ಲಿನ ಅಜೆಕಾರಿನ ಗಾಣದಬೆಟ್ಟು ಎಂಬಲ್ಲಿ ಸಂಶೋಧಕರ ತಂಡಕ್ಕೆ 14 ನೇ ಶತಮಾನದ ಕನ್ನಡ ಶಾಸನವೊಂದು ದೊರೆತಿದೆ. ಉಡುಪಿಯ ಓರಿಯಂಟಲ್ ಆರ್ಕೈವ್ಸ್ ಸಂಶೋಧನಾ ಕೇಂದ್ರದ ನಿರ್ದೇಶಕ ಎಸ್.ಎ ಕೃಷ್ಣಯ್ಯ, ಯು ಕಮಲಾಬಾಯಿ ಪ್ರೌಢಶಾಲೆಯ ನಿವೃತ್ತ ಉಪಾಧ್ಯಾಯ ಕೆ ಶ್ರೀಧರ್ ಭಟ್ ಮತ್ತು ಹೈದರಾಬಾದಿನ ಪ್ಲೀಚ್ ಇಂಡಿಯಾ ಫೌಂಡೇಶನ್ನಿನ ಶೃತೇಶ್ ಆಚಾರ್ಯ ತಂಡವು ಅಮ್ಮು ಶೆಟ್ಟಿ ಎನ್ನುವವರಿಗೆ ಸಂಬಂಧಪಟ್ಟ ಜಾಗದಲ್ಲಿ ಈ ಶಾಸನವನ್ನು ಪತ್ತೆ ಮಾಡಿದೆ.
ಮೂರು ಫೀಟ್ ಉದ್ದ ಎರಡು ಫೀಟ್ ಅಗಲದ ಗ್ರಾನೈಟ್ ಶಿಲೆಯ ಶಾಸನವನ್ನು ಕನ್ನಡ ಲಿಪಿಯಲ್ಲಿ ಹತ್ತು ಸಾಲುಗಳನ್ನು ಬರೆಯಲಾಗಿದೆ. ಸೂರ್ಯ ಚಂದ್ರ ಶಂಖ ಚಕ್ರವನ್ನು ಹೊಂದಿರುವ ಶಾಸನವು 1331 ಶಕವರ್ಷ ಮಾರ್ಗಶಿರ ಶುದ್ದ ಗುರುವಾರ, 1409 (ವಿರೋಧಿ ಸಂವತ್ಸರ) ನವೆಂಬರ್ 7 ಗುರುವಾರಕ್ಕೆ ಅನುಗುಣವಾಗಿದೆ.
ಬೆಟ್ಟಿಮಿನ ಕಾಟು ಮೂಲಿಗೆ ಮನ್ನೆಯಿಂದ ಎಣ್ಣೆ ಮತ್ತು 11 ತೆಂಗಿನಕಾಯಿಗಳನ್ನು ವಿಷ್ಣು ದೇವರಿಗೆ ಸಮರ್ಪಿಸಲಾಗಿದೆ ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಬೆಟ್ಟಿಮ್ ಪ್ರದೇಶವು ಈಗಿನ ಗಾಣದ ಬೆಟ್ಟು ಮತ್ತು ಮನ್ನೆಯು ಈಗಿನ ಮರ್ಣೆ ಎನ್ನುವ ಜಾಗಗಳನ್ನು ಸೂಚಿಸುತ್ತಿದೆ.
ಸಂಶೋಧನಾ ತಂಡಕ್ಕೆ ಪ್ರಕಾಶ್ ಶೆಟ್ಟಿ ಮರ್ಣೆ, ಸುರೇಶ್ ಶೆಟ್ಟಿ ಗಾಣದಬೆಟ್ಟು, ರವಿ ಸಂತೋಷ್ ಆಳ್ವ ಮತ್ತು ಸುಶಾಂತ್ ಶೆಟ್ಟಿ ಮುಂತಾದವರು ಸಹಕರಿಸಿದ್ದಾರೆ.