ಮಂಗಳೂರು: ಪಿಎಫ್‌ಐ, ಎಸ್‌ಡಿಪಿಐ ಕಚೇರಿಗಳ ಮೇಲೆ ಎನ್‌ಐಎ ದಾಳಿ

ಮಂಗಳೂರು: ಇಲ್ಲಿನ ಪಿ.ಎಫ್.ಐ, ಎಸ್.ಡಿಪಿ.ಐ ಸಂಘಟನೆಗಳ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವ ಜನರ ವಿರುದ್ಧ ಸಂಸ್ಥೆಯ ರಾಷ್ಟ್ರವ್ಯಾಪಿ ಶೋಧದ ಭಾಗವಾಗಿ ಗುರುವಾರ ಬೆಳಿಗ್ಗೆ ಈ ದಾಳಿ ನಡೆಸಲಾಗಿದೆ.

ಎರಡೂ ಸಂಘಟನೆಗಳ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಬಜ್ಪೆ, ನೆಲ್ಲಿಕಾಯಿ ಮಾರ್ಗ, ಕುಳಾಯಿ ಮತ್ತು ಕಾವೂರಿನಲ್ಲಿ ಎನ್.ಐ.ಎ ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿ ವೇಳೆ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದಾಳಿ ಸಂದರ್ಭದಲ್ಲಿ ಭದ್ರತೆಯನ್ನು ಒದಗಿಸಲು ಪೊಲೀಸ್ ಸಿಬ್ಬಂದಿಗಳ ಪ್ರಬಲ ಪಡೆಯನ್ನು ನಿಯುಕ್ತಿಗೊಳಿಸಲಾಗಿತ್ತು.

ಕಚೇರಿಗಳ ಮೇಲೆ ಎನ್.ಐ.ಎ ದಾಳಿಯನ್ನು ವಿರೋಧಿಸಿ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ನಿರತರನ್ನು ಬಂಧಿಸಲಾಗಿದೆ. ನೆಲ್ಲಿಕಾಯಿ ಮಾರ್ಗದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸಿ.ಆರ್.ಪಿ.ಎಫ್ ಸಿಬ್ಬಂದಿಗಳನ್ನು ನಿಯುಕ್ತಿಗೊಳಿಸಲಾಗಿದೆ. ಸಿಬ್ಬಂದಿಗಳು ಮಾರ್ಗವನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದರು ಎಂದು ಮಾಧ್ಯಮ ವರದಿ ಮಾಡಿದೆ.

ಬೆಂಗಳೂರು ಮತ್ತು ಮಂಗಳೂರಿನಲ್ಲಿ ದಾಳಿಯ ನಂತರ ಹೈದರಾಬಾದ್‌ನಲ್ಲಿ ಪಿ.ಎಫ್.ಐ ನ ಮುಖ್ಯ ಕಚೇರಿಗೆ ಬೀಗ ಹಾಕಿ ಸೀಲ್ ಮಾಡಲಾಗಿದೆ.

ಜುಲೈ 26 ರಂದು ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರೆ ಹತ್ಯೆ ಪ್ರಕರಣದ ತನಿಖೆಯನ್ನು ಎನ್.ಐ.ಎ ನಡೆಸುತ್ತಿದೆ.