ಉಡುಪಿ: ಮಲ್ಪೆ ಬೀಚ್ನಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಭೂ ವಿಜ್ಞಾನ ಇಲಾಖೆ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ನೆಹರೂ ಯುವ ಕೇಂದ್ರ ಹಾಗೂ ಸ್ಧಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬೀಚ್ ಸ್ವಚ್ಛತೆ ಹಾಗೂ ಸುರಕ್ಷತೆಯ ಕುರಿತು ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಸ್ವಚ್ಛ ಸಾಗರ ಸುರಕ್ಷಿತ ಸಾಗರ ಅಭಿಯಾನವು ಶನಿವಾರದಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾ ರಾವ್, ನಿಸರ್ಗ ದತ್ತವಾಗಿ ದೊರಕಿರುವ ಸುಂದರವಾದ ಕಡಲ ತೀರಗಳನ್ನು ಸ್ವಚ್ಛ ಹಾಗೂ ಸುರಕ್ಷಿತವಾಗಿಡಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಪರಿಸರಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಏಕ ಬಳಕೆ ಪ್ಲಾಸ್ಟಿಕ್ನ ಬಳಕೆಯನ್ನು ತ್ಯಜಿಸಬೇಕು. ಪರಿಸರ ರಕ್ಷಣೆಗಾಗಿ ಪೂರಕ ಪ್ರಯತ್ನಗಳು ಹಾಗೂ ಚಟುವಟಿಗಳು ದೈನಂದಿನ ದಿನಚರಿಯ ಅಂಗವಾಗಬೇಕು. ಯುವ ಜನರಿಗೆ ಬಾಲ್ಯದಿಂದಲೇ ಇಂತಹ ಚಟುವಟಿಕೆಗಳ ಕುರಿತು ಅರಿವು ಮೂಡಿಸುವ ಪ್ರಯತ್ನಗಳು ಮನೆ ಹಾಗೂ ಶಾಲೆಗಳಲ್ಲಿ ನಡೆಯಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಮಾತನಾಡಿ, ಕಡಲ ತೀರದ ಸ್ವಚ್ಛತೆ ಕೇವಲ ಒಂದು ದಿನದ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಇದೊಂದು ನಿರಂತರ ಪ್ರಕ್ರಿಯೆಯಾಗಬೇಕು. ಈ ಮೂಲಕ ಮನುಷ್ಯ ಹಾಗೂ ಪ್ರಕೃತಿಯ ನಡುವೆ ಪರಸ್ವರ ಸಾಮರಸ್ಯ ಬೆಸೆಯಲು ಸಾಧ್ಯ. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹೊಂದಿರುವ ಮಲ್ಪೆ ಬೀಚ್ನ ಹಿರಿಮೆಯನ್ನು, ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಕಡಲ ತೀರದ ಸ್ವಚ್ಛತೆ ಹಾಗೂ ಸುರಕ್ಷತೆ ಮಹತ್ವದ್ದಾಗಿದೆ. ಪ್ರತಿಯೊಬ್ಬರೂ ಸ್ವಯಂ ಕಾಳಜಿಯಿಂದ ಸಮದ್ರ ತೀರದ ಸ್ವಚ್ಛತಾ ಕಾರ್ಯವನ್ನು ಆದ್ಯತೆಯ ಮೇರೆಗೆ ಕೈಗೊಂಡು, ಪ್ರಕೃತಿದತ್ತವಾಗಿ
ಬಂದಿರುವ ನೈಸರ್ಗಿಕ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕರಾವಳಿ ಕಾವಲು ಪೊಲೀಸ್ ಪಡೆಯ ಅಧೀಕ್ಷಕ ಅಬ್ದುಲ್ ಅಹಮದ್, ಭಾರತೀಯ ತಟ ರಕ್ಷಣಾ ಪಡೆಯ ಕಮಾಂಡೆಂಟ್ ಅವಿನಾಶ್, ಪೌರಾಯುಕ್ತ ಡಾ.ಉದಯ್ ಕುಮಾರ್ ಶೆಟ್ಟಿ, ಕೇಂದ್ರ ಸರ್ಕಾರದ ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಡಾ. ಆಶಾ, ಇತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂದೇಶ್ ಕುಮಾರ್ ನಿರೂಪಿಸಿದರು. ನೆಹರೂ ಯುವ ಕೇಂದ್ರದ ಯುವಜನ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿ.ಸೋಜಾ ವಂದಿಸಿದರು.