ಭಾರತೀಯ ಸೇನೆಗೆ ಅಸಾಧ್ಯವಾದುದು ಯಾವುದೂ ಇಲ್ಲ: ಸಿಂಧೂ ನದಿಗೆ ಸೇತುವೆ ಕಟ್ಟಿದ ಸಪ್ತ ಶಕ್ತಿ ಇಂಜಿನಿಯರ್ ಗಳ ಅಸಾಮಾನ್ಯ ಸಾಧನೆ

ಲಡಾಕ್: ಬಾನೆತ್ತರದ ಗಿರಿ ಶಿಖರದ ಮೇಲೆ, ಆಳವಾದ ಸಮುದ್ರ, ಕೊರಕಲು ಭೂಪ್ರದೇಶ, ದೊಡ್ಡ ಬಂಡೆಕಲ್ಲಿರಲಿ ಎಲ್ಲಿ ಬೇಕೆಂದರಲ್ಲಿ ಹೇಗೆ ಬೇಕೆಂದರೆ ಹಾಗೆ; ರಸ್ತೆ, ಸೇತುವೆ, ರೈಲ್ವೆ ಲೈನ್ ಹೀಗೆ ಭಾರತೀಯ ಸೇನೆಗೆ ಅಸಾಧ್ಯವಾದುದು ಯಾವುದೂ ಇಲ್ಲ.

ಭಾರತೀಯ ಸೇನೆಯು ಲಡಾಖ್‌ನಲ್ಲಿ ಸಿಂಧೂ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸಿದೆ. ಸೇತುವೆಯು ಭಾರತೀಯ ಸೇನೆಯ ಪ್ರಭಾವಶಾಲಿ ಎಂಜಿನಿಯರಿಂಗ್ ಕೌಶಲ್ಯಗಳನ್ನು ಜಗತ್ತಿಗೆ ಪ್ರದರ್ಶಿಸುತ್ತಿದೆ. ಸಪ್ತ ಶಕ್ತಿ ಇಂಜಿನಿಯರ್ ಗಳು ನಿರ್ಮಾಣ ಮಾಡಿರುವ ಈ ಸೇತುವೆ ಇಂಜಿನಿಯರಿಂಗ್ ಲೋಕದ ಅದ್ಭುತವೆನಿಸಿದೆ.

“ಸೇತುವೆ ಸವಾಲುಗಳು – ಯಾವುದೇ ಭೂಪ್ರದೇಶ ಅಥವಾ ಎತ್ತರ ದುಸ್ತರವಲ್ಲ” ಎಂಬ ಶೀರ್ಷಿಕೆಯಡಿ ಭಾರತೀಯ ಸೇನೆಯ ನೈಋತ್ಯ ಕಮಾಂಡ್ ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. ಪೂರ್ವ ಲಡಾಖ್‌ನಲ್ಲಿರುವ ಸಪ್ತ ಶಕ್ತಿ ಇಂಜಿನಿಯರ್‌ಗಳು ಚಲನಶೀಲತೆ ಕಾರ್ಯಗಳು ಮತ್ತು ತರಬೇತಿಯನ್ನು ನಿರ್ವಹಿಸುತ್ತಿದ್ದಾರೆ.ಯುದ್ಧ ಮತ್ತು ಸಾಮಾಗ್ರಿಗಳ ಸರಬರಾಜನ್ನು ಸಕ್ರಿಯಗೊಳಿಸಲು ಪ್ರಬಲವಾದ ಸಿಂಧೂ ನದಿಗೆ ಸೇತುವೆ ಕಟ್ಟಲಾಗಿದೆ ಎಂದು ಸೇನೆ ಹೇಳಿದೆ.

ಭಾರವಾದ ಲೋಹದ ಭಾಗಗಳನ್ನು ನೀರಿಗೆ ಹಾಕಿ ಅದರ ಮೇಲೆ ಭಾರತೀಯ ಸೇನೆಯ ವಾಹನಗಳು ಈ ದಡದಿಂದ ಆ ದಡಕ್ಕೆ ಸರಾಗವಾಗಿ ಚಲಿಸುವುದನ್ನು ತೋರಿಸಲಾಗಿದೆ. ಈ ಸೇತುವೆಯು ದೇಶದ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣವಾಗಿದೆ.