ಫಾರ್ಚ್ಯೂನ್ ಆರೋಗ್ಯ ವಿಜ್ಞಾನ ಸಂಸ್ಥೆಯಲ್ಲಿ “ಆರಂಭಮ್ – 2022” ಓಣಂ ಸಾಂಸ್ಕೃತಿಕ ಕಾರ್ಯಕ್ರಮ

ಬ್ರಹ್ಮಾವರ: ಇಲ್ಲಿನ ಮಧುವನ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಫಾರ್ಚ್ಯೂನ್ ಆರೋಗ್ಯ ವಿಜ್ಞಾನಗಳ ಸಂಸ್ಥೆ ವತಿಯಿಂದ  ಓಣಂ ಹಬ್ಬದ ಅಂಗವಾಗಿ “ಆರಂಭಮ್ – 2022” ಸಾಂಸ್ಕೃತಿಕ ಕಾರ್ಯಕ್ರಮ  ಮಂಗಳವಾರದಂದು ಮದರ್ ಪ್ಯಾಲೇಸ್ ಆಡಿಟೋರಿಯಂನಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ  ಸಂಸ್ಥೆಯ ಪ್ರಾಂಶುಪಾಲೆ ಸ್ಮಿತಾ ಮಾತನಾಡಿ, ಓಣಂ ಎನ್ನುವುದು ಕೇರಳದಲ್ಲಿ ಚಕ್ರವರ್ತಿ ಬಲಿಯ ನೆನಪಿಗಾಗಿ ಆಚರಿಸುವ ಹಬ್ಬ. ಇದು ಕೇರಳದ ಸಂಸ್ಕೃತಿ, ಧಾರ್ಮಿಕತೆ ಮತ್ತು ಪರಂಪರೆಯನ್ನು ಬಿಂಬಿಸುವ ಈ ಹಬ್ಬಕ್ಕೆ ಬಹಳ ಮಹತ್ವ ಇದೆ. ಈ ಹಬ್ಬವನ್ನು ಆಚರಿಸುವ ಮೂಲಕ ನಾವು ನಮ್ಮ ಸಾಂಸ್ಕೃತಿಕ ಮತ್ತು ನೈತಿಕತೆಯ ಹೆಗ್ಗುರುತನ್ನು ಕಾಪಾಡುವ ಪ್ರಯತ್ನ ಮಾಡುತ್ತಿದ್ದೇವೆ. ಓಣಂ ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ಮತ್ತು ಸಂತೋಷವನ್ನು ತರಲಿ ಎಂದು ಹಾರೈಸಿದರು.

ಮದರ್ ಪ್ಯಾಲೇಸ್ ಮಾಲಕ ಭರತ್ ಶೆಟ್ಟಿ ಮಾತನಾಡಿ, ನಮ್ಮ ನಾಡಿನಲ್ಲಿ ಓಣಂ ಅನ್ನು ಆಚರಿಸಿದ್ದರಿಂದ ಕೇರಳದ ಕಂಪನ್ನು ಇಲ್ಲಿ ಪಸರಿಸಿದಂತಾಯಿತು. ಇಂತಹ ಆಚರಣೆಗಳು ಇಡೀ ದೇಶದಲ್ಲೇ ನಡೆಯುವಂತಾಗಬೇಕು. ಆರೋಗ್ಯ ಕ್ಷೇತ್ರದ ವಿದ್ಯಾರ್ಥಿಗಳ ಹೆಗಲ ಮೇಲೆ ಗುರುತುರವಾದ ಜವಾಬ್ದಾರಿಯಿದ್ದು, ಭವಿಷ್ಯದಲ್ಲಿ ಇದನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು.

ಪ್ರಾಧ್ಯಾಪಕಿ ವೀಣಾ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು. ಸಂಸ್ಥೆಯ ಅಧ್ಯಕ್ಷ ತಾರಾನಾಥ್ ಶೆಟ್ಟಿ ಬಹುಮಾನ ವಿತರಿಸಿದರು.

ವಿಧು ಮತ್ತು ತಂಡದವರು ಓಣಂ ಗೀತೆಯನ್ನು ಹಾಡಿದರು. ತುಷಾರ ಓಣಂ ಕಥೆಯನ್ನು ತಿಳಿಸಿದರು.

ಕಾರ್ಯಕ್ರಮ ಸಂಯೋಜಕ ಸೋನು, ವಿದ್ಯಾರ್ಥಿ ನಾಯಕರಾದ ದೀಕ್ಷಾ ಮತ್ತು ಗಿರೀಶ್ ಹಾಗೂ ಸಂಸ್ಥೆಯ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

 

ಐಶ್ವರ್ಯ ಪ್ರಾರ್ಥಿಸಿದರು. ನಯನ ಸ್ವಾಗತಿಸಿದರು. ಸೋಫಿಯಾ ವಂದಿಸಿದರು. ಮಮತಾ ಜಿ.ಜಿ ನಿರೂಪಿಸಿದರು.

ಓಣಂ ಅಂಗವಾಗಿ ಪೂಕಳಂ ಮತ್ತು  ಹಗ್ಗ ಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿತ್ತು.

 

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.