ಏಕ ಬಳಕೆಯ ಪೆನ್ನುಗಳಿಂದ ಮುಕ್ತಿ ಪಡೆಯಲು ಮಾಹೆಯ ‘ರಿ-ಪೆನ್’ ಯೋಜನೆ 

ಮಣಿಪಾಲ: ಏಕ ಬಳಕೆಯ ಪೆನ್ನುಗಳ ಬಳಕೆಯನ್ನು ನಿರುತ್ಸಾಹಗೊಳಿಸುವ ಮತ್ತು ಮರುಪೂರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ‘ರಿ-ಪೆನ್’ ಎಂಬ ಸಿ. ಎಸ್. ಆರ್ ಪ್ರಾಯೋಜಿತ ಯೋಜನೆಯನ್ನು ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್ ಇವರು ಉದ್ಘಾಟಿಸಿದರು.

ಈ ‘ರಿ-ಪೆನ್’ ಯೋಜನೆಯನ್ನು ಕೈಗೆತ್ತಿಕೊಳ್ಳಲು ಪುತ್ತೂರಿನ ಶ್ಯಾಮಾ ಜ್ಯುವೆಲ್ಸ್ ಪ್ರೈ. ಲಿ ಸಂಸ್ಥೆಯು ತನ್ನ ಸಿ. ಎಸ್. ಆರ್ ನಿಧಿಯಿಂದ ಆರ್ಥಿಕ ಸಹಾಯವನ್ನು ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್‌ನ ಇಕೋ ಕ್ಲಬ್ ಗೆ ನೀಡಿದೆ.

ಪರಿಸರದ ಉಳಿವಿಗಾಗಿ ಇಂಗಾಲಾಮ್ಲದ ಹೆಜ್ಜೆಗುರುತುಗಳನ್ನು ಕಡಿಮೆಗೊಳಿಸುವ ಅವಶ್ಯಕತೆ ಇದ್ದು, ಏಕಬಳಕೆ ಮಾಡಿ ಬಿಸಾಡುವ ಪೆನ್ನುಗಳಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಇದರ ಬದಲು ಮರುಪೂರಣ ಮಾಡಬಹುದಾದ ಪೆನ್ನುಗಳನ್ನು ಬಳಸಿದಲ್ಲಿ ಪ್ಲಾಸ್ಟಿಕ್ ನಿಂದ ಪರಿಸರಕ್ಕಾಗುವ ಹಾನಿ ಕಡಿಮೆಯಾಗಲಿದೆ.

ಕುಡಿಯುವ ನೀರು ಮತ್ತು ನೈರ್ಮಲ್ಯ, ಜಲ ಶಕ್ತಿ ಸಚಿವಾಲಯದ ಸ್ವಚ್ಛತಾ ಪಖವಾಡದ ದಿನದಂದೇ ರಿ-ಪೆನ್ ಯೋಜನೆ ಬಿಡುಗಡೆಯಾಗಿದೆ.

ಈ ಸಂದರ್ಭದಲ್ಲಿ ಮಾಹೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.