ಸರಕಾರದಿಂದ ಕೊರಗ ಸಮುದಾಯಕ್ಕೆ ಅನ್ಯಾಯವಾದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು: ಡಾ.ಪಿ.ವಿ ಭಂಡಾರಿ

ಉಡುಪಿ: ನೈಲ ಬುಡಕಟ್ಟು ಕೊರಗ ಸಮುದಾಯಕ್ಕೆ ವೈದ್ಯಕೀಯ ವೆಚ್ಚ ಮರುಪಾವತಿ ಯೋಜನೆಯನ್ನು ಸರಕಾರವು ಕೈಬಿಡಲು ಯೋಜಿಸಿದ್ದು, ಇದನ್ನು ವಿರೋಧಿಸಿ ಡಾ ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಕೊರಗರ ಸಂಘದಿಂದ ಹಕ್ಕೊತ್ತಾಯ ಜಾಥಾ ಮತ್ತು ಬೃಹತ್ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪಿ.ವಿ.ಭಂಡಾರಿ, ಕೇಂದ್ರ ಸರಕಾರವು ಎರಡು ಅತ್ಯುತ್ತಮ ಯೋಜನೆಗಳಾದ ಜನೌಷಧಿ ಮತ್ತು ಅಯುಷ್ಮಾನ್ ಭಾರತ್ ಗಳನ್ನು ಜಾರಿಗೆ ತಂದಿದ್ದರೂ, ಸರಕಾರದಲ್ಲಿರುವ ಮೇಲಧಿಕಾರಿಗಳು ಈ ಯೋಜನೆಗಳ ಸಮರ್ಪಕ ಅನುಷ್ಠಾನ ಆಗಲು ಬಿಡುತ್ತಿಲ್ಲ. ಮೊದಲು ರೆಫೆರಲ್ ಗೆ ಪೀಡಿಸಿ ಜನರಿಂದ ವಿರೋಧ ಕಂಡು ಬಂದ ಬಳಿಕ ಅದನ್ನು ಬದಲಾಯಿಸಿದರು. ಇದೀಗ ಕೋಡ್ ಎನ್ನುವ ನಿಯಮವನ್ನು ತಂದಿದ್ದು ಇದರಿಂದ ಕೊರಗರಿಗೆ ಅನ್ಯಾಯವಾಗುತ್ತಿದೆ.

ಸರಕಾರವು ಕುಡಿಯುವುದರಿಂದ ಆರೋಗ್ಯ ಹಾಳಾಗುತ್ತಿದ್ದು, ಕೊರಗರ ಚಿಕಿತ್ಸೆಯ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲು ಸಾಧ್ಯವಿಲ್ಲ ಎನ್ನುವ ಸಬೂಬು ನೀಡುತ್ತಿದೆ. ಆದರೆ ಮತ್ತೊಂದೆಡೆ ಸರಕಾರವೇ ಕುಡಿಯಲು ಪ್ರೇರೇಪಿಸುತ್ತದೆ. ಸರಕಾರಕ್ಕೆ 19-20% ಆದಾಯ ಮದ್ಯಪಾನದಿಂದ ಬರುತ್ತಿದ್ದು ಸರಕಾರವು ಅಬಕಾರಿ ಇಲಾಖೆಗೆ ಗುರಿ ನೀಡುತ್ತದೆ. ಮದ್ಯ ಮಾರಾಟ ಹೆಚ್ಚಿಸಲು ಸರಕಾರವೇ ಗುರಿ ನಿಗದಿ ಪಡಿಸಿ ಜನರನ್ನು ಕುಡಿತದ ಚಟಕ್ಕೆ ನೂಕಿ, ಈಗ ಕುಡಿತದ ಕಾರಣ ನೀಡಿ ಕೊರಗರ ವೈದ್ಯಕೀಯ ವೆಚ್ಚವನ್ನು ಭರಿಸುವುದು ಸಾಧ್ಯವಿಲ್ಲ ಎನ್ನುತ್ತದೆ.

ಜನರ ಹಿತಕ್ಕಾಗಿ ಕೆಲವೊಂದು ಜನಪರ ಯೋಜನೆಗಳು ಬರುತ್ತಿದ್ದು ಪಕ್ಷಾತೀತವಾಗಿ ಇಂತಹ ಯೋಜನೆಗಳನ್ನು ಬೆಂಬಲಿಸುತ್ತೇನೆ ಎಂದ ಅವರು ಎಸಿ ರೂಮುಗಳಲ್ಲಿ ಕುಳಿತ ಅಧಿಕಾರಿಗಳು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಜನರಿಗೆ ಕಾನೂನು ರೀತ್ಯಾ ಸಿಗುವ ಅಧಿಕಾರಗಳನ್ನು ಹಂತ ಹಂತವಾಗಿ ತೆಗೆಯುವ ಹುನ್ನಾರ ನಡೆಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಈ ಹಿಂದೆಯೂ ಹೋರಾಟಗಳನ್ನು ನಡೆಸಿದ್ದು, ಕೊರಗರಿಗೆ ಅನ್ಯಾಯವಾದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ತೀವ್ರತರವಾದ ಹೋರಾಟ ನಡೆಸುತ್ತೇವೆ. ಮುಂದಿನ ಹತ್ತರಿಂದ ಹದಿನೈದು ದಿನಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ಚುನಾವಣಾ ಸಮಯದಲ್ಲಿ ಬಿಸಿ ಮುಟ್ಟಿಸಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಪ್ರಕರಣದ ಹಿನ್ನೆಲೆ

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಾಸವಿರುವ ಪರಿಶಿಷ್ಟ ಪಂಗಡದ ನೈಜ ಬುಡಕಟ್ಟು ಸಮುದಾಯದ ಕೊರಗರು ಇಂದು ಅಳಿವಿನ ಅಂಚಿನಲ್ಲಿರುವ ಸಮುದಾಯವಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ನಮ್ಮ ಸಮುದಾಯದ ಆರೋಗ್ಯ ಸ್ಥಿತಿಯು ತೀರಾ ಹದಗೆಟ್ಟಿದೆ. ಇದನ್ನು ಮನಗಂಡು ಈ ಹಿಂದೆ ಸರಕಾರವು ನಮ್ಮವರ ಆರೋಗ್ಯ ಸುಧಾರಣೆಗಾಗಿ ವೈದ್ಯಕೀಯ ವೆಚ್ಚದ ಮರುಪಾವತಿಗೆ ಅನುದಾನ ಒದಗಿಸುತ್ತಿತ್ತು, ಆದರೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರ ಪ್ರಸ್ತಾವನೆಯ ಆಧಾರದಲ್ಲಿ ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯವರು ಇನ್ನು ಮುಂದೆ ಯಾವುದೇ ಕಾರಣಕ್ಕೆ ಈ ಯೋಜನೆ ಮುಂದುವರಿಯುವುದಿಲ್ಲ ಎಂಬ ಆದೇಶವನ್ನು ನೀಡಿರುತ್ತಾರೆ. ಕೊರಗರು ಮದ್ಯಪಾನ ಮಾಡುವುದರಿಂದ ತೀವ್ರ ಕಾಯಿಲೆಗಳು ಬರುತ್ತವೆ ಎಂಬ ಅರ್ಥದಲ್ಲಿ ಪ್ರಸ್ತಾವನೆ ಸಲ್ಲಿಸಿರುವುದರಿಂದ ಈ ಯೋಜನೆಯನ್ನು ಕೈ ಬಿಟ್ಟಿರಬಹುದೆಂಬ ಅನುಮಾನ ಇದೆ. ಆದರೆ ಇದು ಸರಿಯಾದ ಮಾಹಿತಿಯಲ್ಲ, ಯಾಕೆಂದರೆ ಸರಕಾರ ಈವರೆಗೂ ಧರಿಸಿದ ವೆಚ್ಚದಲ್ಲಿ ಬಹುಪಾಲು ಕಾಯಿಲೆಗಳು, ಕಿಡ್ನಿ ವೈಫಲ್ಯ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳೇ ಆಗಿವೆ ಎನ್ನುವುದು ಕೊರಗ ಸಮುದಾಯದ ವಾದ. ಆದುದರಿಂದ ವೈದ್ಯಕೀಯ ವೆಚ್ಚವನ್ನು ರದ್ದು ಪಡಿಸುವ ಆದೇಶವನ್ನು ಹಿಂಪಡೆದು ಹಿಂದಿನಂತೆಯೇ ಯೋಜನೆಯ ಜಾರಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಕೊರಗ ಸಮುದಾಯ ಸರ್ಕಾರಕ್ಕೆ ಮಾನವಿ ಮಾಡಿದೆ.