ಅಂಬಲಪಾಡಿ: ಹಿರಿಯ ನಾಗರಿಕರನ್ನು ರಂಜಿಸಿದ ಜಾನಪದ ವೈಭವ ಕಾರ್ಯಕ್ರಮ 

ಉಡುಪಿ : ತಲ್ಲೂರು ಫ್ಯಾಮಿಲಿ ಟ್ರಸ್ಟ್, ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿ ಹಿರಿಯ ನಾಗರಿಕರ ಸಂಸ್ಥೆಯ ಸಹಕಾರದಲ್ಲಿ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಶನಿವಾರ ನಡೆದ `ಜಾನಪದ ವೈಭವ ‘ ಕಾರ್ಯಕ್ರಮ ಹಿರಿಯ ನಾಗರಿಕರನ್ನು ರಂಜಿಸಿತು.

ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಡುಪಿಯ `ಕಲಾಮಯಂ ‘ ಸಾಂಸ್ಕೃತಿಕ ತಂಡ ವೈವಿಧ್ಯಮಯ ಜಾನಪದ ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ಜಾನಪದ ಲೋಕವನ್ನೇ ಸೃಷ್ಟಿಸಿತು. ಕರಗ ಕೋಲಾಟ, ವೀರಗಾಸೆ, ಮಂಟೆಸ್ವಾಮಿ ಕಾವ್ಯ ಗಾಯನ, ಜಾನಪದ ಆರ್ಕೆಸ್ಟ್ರಾ ಮೊದಲಾದ ಜಾನಪದ ಪ್ರಕಾರಗಳು ಪ್ರದರ್ಶನಗೊಂಡವು.

ಇಲ್ಲಿ  ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ಹಲವಾರು ಜಾನಪದ ಕಲೆಗಳು ಇನ್ನೂ ಆರಾಧನಾ ಕಲೆಗಳಾಗಿಯೇ ಉಳಿದಿರುವುದರಿಂದ ಅವುಗಳ ಬಗ್ಗೆ ಹೆಚ್ಚಿನ ಅರಿವು ಸಮಾಜಕ್ಕಿಲ್ಲ. ಈ ನಿಟ್ಟಿನಲ್ಲಿ ಪರಿಷತ್ ವತಿಯಿಂದ ಜಾನಪದ ಕಲೆಗಳ ಪ್ರದರ್ಶನಕ್ಕೆ ವೇದಿಕೆ, ಉತ್ತೇಜನ ಕಲ್ಪಿಸಲಾಗುತ್ತಿದೆ. ಸಮಾಜದ ಪ್ರೋತ್ಸಾಹವಿಲ್ಲದೆ ಈ ಸಾಂಸ್ಕೃತಿಕ ಸಂಪತ್ತನ್ನು ಉಳಿಸಿ ಬೆಳೆಸುವುದು ಕಷ್ಟ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಹಿರಿಯ ನಾಗರಿಕರ ಸಂಸ್ಥೆಯ ಗೌರವಾಧ್ಯಕ್ಷ ಸಿ.ಎಸ್.ರಾವ್, ಅಧ್ಯಕ್ಷ ವಿಶ್ವನಾಥ ಹೆಗ್ಡೆ, ಪದಾಧಿಕಾರಿಗಳಾದ ಮುರಳೀಧರ್, ಹರಿದಾಸ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿರಾಜ ನಾಯಕ್ ಕಾರ್ಯಕ್ರಮ ಸಂಯೋಜಿಸಿ, ನಿರೂಪಿಸಿದರು.