ಉಡುಪಿ ಪೋಕ್ಸೋ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಷರತ್ತು ಬದ್ಧ ಜಾಮೀನು ಮಂಜೂರುಗೊಳಿಸಿದ್ದಾರೆ.
ಆರೋಪಿಯು ಸಂತ್ರಸ್ತ ಬಾಲಕಿಯ ದೂರದ ಸಂಬಂಧಿಯಾಗಿದ್ದು, ಸುಮಾರು 3 ವರ್ಷದ ಹಿಂದೆ ಬಾಲಕಿಯನ್ನು ಪರಿಚಯಿಸಿಕೊಂಡು ದೂರವಾಣಿ ಮೂಲಕ ಮಾತುಕತೆ ನಡೆಸುತ್ತಿದ್ದ, ಅನಂತರ ಆತ ಆಕೆಯನ್ನು ಹೆಬ್ರಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಯಾರೂ ಇಲ್ಲದ ಸಮಯದಲ್ಲಿ ಮದುವೆ ಮಾಡಿಕೊಂಡಿದ್ದ. ಬಳಿಕ ಆಕೆಯನ್ನು ಹೊಸಪೇಟೆಗೆ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ನಡೆಸಿರುವುದು ತನಿಖೆಯಿಂದ ದೃಢಪಟ್ಟಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಜಿಲ್ಲಾ ಪೋಕ್ಸೋ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು.
ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅವರು ಆರೋಪಿಯ ಜಾಮೀನು ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿ ಷರತ್ತುಬದ್ಧ ಜಾಮೀನು ನೀಡಿದ್ದಾರೆ. 1 ಲ.ರೂ. ವೈಯಕ್ತಿಕ ಬಾಂಡ್ ಮತ್ತು ಎರಡು ಜಾಮೀನುದಾರರೊಂದಿಗೆ ಜಾಮೀನು ಮಂಜೂರುಗೊಂಡಿದೆ. ಮುಂದಿನ ವಿಚಾರಣೆ ಸೆ. 23ಕ್ಕೆ ನಡೆಯಲಿದೆ. ಆರೋಪಿ ಪರ ವಕೀಲ ಶಿರಿಯಾರ ಪ್ರಭಾಕರ ನಾಯಕ್ ವಾದಿಸಿದ್ದರು.