ಉಡುಪಿ/ಮಂಗಳೂರು: ಇಂದು ಕನ್ಯಾ ಮಾತೆ ಮೇರಿಯ ಜನ್ಮ ದಿನವಾಗಿದ್ದು ಕರಾವಳಿಯ ಕ್ರೈಸ್ತರು ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ. ಇಂದು ಕರಾವಳಿ ಕರ್ನಾಟಕದ ಎಲ್ಲಾ ಚರ್ಚುಗಳಲ್ಲಿಯೂ ವಿಶೇಷ ಪ್ರಾರ್ಥನೆಗಳು ಜರುಗುತ್ತವೆ. ಆಗಸ್ಟ್ 30 ರಿಂದ ವಿಶೇಷ ನೊವೇನಾ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಮೊಂತಿ ಅಥವಾ ತೆನೆ ಹಬ್ಬದ ಆಚರಣೆ ಆರಂಭವಾಗಿ, 9 ದಿನಗಳ ಕಾಲ ನಡೆಯುತ್ತದೆ. ಪುಟಾಣಿ ಮಕ್ಕಳು ತಮ್ಮ ಮನೆಯಂಗಳದಲ್ಲಿ ಬೆಳೆದ ವಿವಿಧ ಹೂವುಗಳನ್ನು ತಟ್ಟೆಯಲ್ಲಿಟ್ತು ಅಲಂಕರಿಸಿ ಮಾತೆ ಮೇರಿಗೆ ಸಮರ್ಪಿಸುತ್ತಾರೆ. ಕಡೆ ದಿನ, ಸೆಪ್ಟೆಂಬರ್ 8 ರಂದು ಆಯಾಯ ಚರ್ಚ್ ಗಳಲ್ಲಿ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸಲಾಗುತ್ತದೆ.
ಈ ದಿನದಂದು ತಮ್ಮ ಗದ್ದೆಗಳಲ್ಲಿ ಬೆಳೆದ ಹೊಸ ಭತ್ತದ ತೆನೆಗಳನ್ನು ಕಟಾವು ಮಾಡಿ ಚರ್ಚ್ ಗೆ ಕೊಂಡೊಯ್ದು ಆಶೀರ್ವಚನ ಸ್ವೀಕರಿಸಿ ಮೇರಿ ಮಾತೆಯನ್ನು ಸ್ತುತಿಸಿದ ಬಳಿಕ ತೆನೆಗಳನ್ನು ಎಲ್ಲರಿಗೂ ಹಂಚಲಾಗುತ್ತದೆ. ಬಳಿಕ ಸಂಭ್ರಮದ ಬಲಿ ಪೂಜೆ ನೆರವೇರುತ್ತದೆ. ಮಕ್ಕಳಿಗೆ ಸಿಹಿ ತಿಂಡಿ ಮತ್ತು ಕಬ್ಬನ್ನು ಹಂಚಲಾಗುತ್ತದೆ. ಎಲ್ಲರೂ ತೆನೆಗಳನ್ನು ತಮ್ಮ ಮನೆಗಳಿಗೆ ಕೊಂಡೊಯ್ದು, ಶುದ್ದ ಸಸ್ಯಾಹಾರಿ ಭೋಜನವನ್ನು ಸ್ವೀಕರಿಸಿ ಕುಟುಂಬಿಕರು ಮತ್ತು ಮಿತ್ರರೊಂದಿಗೆ ಹಬ್ಬವನ್ನಾಚರಿಸುತ್ತಾರೆ.
ಚಿತ್ರಕೃಪೆ: ಇಂಟರ್ನೆಟ್