ನವದೆಹಲಿ: ಬ್ರಿಟಿಷರ ಕಾಲದ ಗುಲಾಮಗಿರಿಯ ಎಲ್ಲಾ ಸಂಕೇತಗಳನ್ನು ನಿರ್ಮೂಲನೆ ಮಾಡುವ ಪಣ ತೊಟ್ಟಿರುವ ಪ್ರಧಾನಿ ಮೋದಿ, ಐ.ಎನ್. ಎಸ್ ವಿಕ್ರಾಂತ್ ನಲ್ಲಿರುವ ಬ್ರಿಟಿಷರ ಕಾಲದ ನೌಕಾ ಧ್ವಜವನ್ನು ಬದಿಗೊತ್ತಿ ಛತ್ರಪತಿ ಶಿವಾಜಿ ಮಹಾರಾಜರ ನೌಕಾ ಧ್ವಜದಿಂದ ಪ್ರೇರಿತ ಧ್ವಜವನ್ನು ಅನಾವರಣಗೊಳಿಸಿದ ಬೆನ್ನೆಲ್ಲೇ, ದೆಹಲಿಯ ರಾಜಪಥದ ಹೆಸರನ್ನು ಬದಲಿಸಿ ಇನ್ನು ಮುಂದೆ ಅದನ್ನು ‘ಕರ್ತವ್ಯ ಪಥ’ವೆಂದು ಘೋಷಿಸಲು ಬೇಕಾದ ಕ್ರಮಗಳನ್ನು ಕೈಗೊಂಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ಸೆಂಟ್ರಲ್ ವಿಸ್ಟಾದ ಕರ್ತವ್ಯ ಪಥವನ್ನು ಉದ್ಘಾಟಿಸಲಿದ್ದಾರೆ. ವಸಾಹತುಶಾಹಿ ಗುಲಾಮಗಿರಿಯ ಸಂಕೇತವಾಗಿದ್ದ ರಾಜಪಥವಿನ್ನು ಸಾರ್ವಜನಿಕ ಮಾಲೀಕತ್ವ ಮತ್ತು ಸಬಲೀಕರಣದ ಸಂಕೇತವಾಗಿ ಕರ್ತವ್ಯ ಪಥವಾಗಿ ಪಲ್ಲಟವಾಗಲಿದೆ. ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ಟಾ ಮರುಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಸಂಪೂರ್ಣ ವಿಸ್ತಾರವನ್ನು ನವೀಕರಿಸಲಾಗಿದೆ.
ಇದೇ ಸಂದರ್ಭದಲ್ಲಿ ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಕೂಡಾ ಮೋದಿ ಅನಾವರಣಗೊಳಿಸಲಿದ್ದಾರೆ. ಒಟ್ಟು 28 ಅಡಿಯ ಅಚ್ಚ ಕಪ್ಪು ಗ್ರಾನೈಟ್ ಶಿಲೆಯ ಪ್ರತಿಮೆಯನ್ನು ಇಂಡಿಯಾ ಗೇಟ್ ಬಳಿಯ ಚಾವಣಿಯ ಅಡಿಯಲ್ಲಿ ಇರಿಸಲಾಗುತ್ತದೆ. ಸಾಂಪ್ರದಾಯಿಕ ತಂತ್ರಗಳು ಮತ್ತು ಆಧುನಿಕ ಉಪಕರಣಗಳನ್ನು ಬಳಸಿಕೊಂಡು ಪ್ರತಿಮೆಯನ್ನು ಸಂಪೂರ್ಣವಾಗಿ ಕೈಯಿಂದ ಕೆತ್ತಲಾಗಿದೆ. ಈ ಕ್ರಮಗಳು ಅಮೃತ ಕಾಲದಲ್ಲಿರುವ, ವಸಾಹತುಶಾಹಿ ಮನಸ್ಥಿತಿಯ ಯಾವುದೇ ಕುರುಹುಗಳನ್ನು ತೆಗೆದುಹಾಕುವ ನವ ಭಾರತಕ್ಕಾಗಿ ಪ್ರಧಾನಿಯವರ ಎರಡನೇ ಪಂಚ ಪ್ರಾಣಕ್ಕೆ ಅನುಗುಣವಾಗಿವೆ.
ಕರ್ತವ್ಯ ಪಥವು ಸುಧಾರಿತ ಸಾರ್ವಜನಿಕ ಸ್ಥಳಗಳು, ಕಾಲುದಾರಿಗಳು, ಹುಲ್ಲುಹಾಸುಗಳು, ಹಸಿರು ಪ್ರದೇಶ, ಸುಧಾರಿತ ಸಂಕೇತಗಳು, ಹೊಸ ಸೌಕರ್ಯ ವಿಭಾಗಗಳು ಮತ್ತು ಮಾರಾಟ ಕಿಯೋಸ್ಕ್‌ಗಳನ್ನು ಒಳಗೊಂಡಂತೆ ಹಲವಾರು ಸೌಲಭ್ಯಗಳನ್ನು ಒಳಗೊಂಡಿದೆ. ಇದಲ್ಲದೆ, ಹೊಸ ಪಾದಚಾರಿ ಕೆಳಸೇತುವೆಗಳು, ಸುಧಾರಿತ ಪಾರ್ಕಿಂಗ್ ಸ್ಥಳಗಳು, ಹೊಸ ಪ್ರದರ್ಶನ ಫಲಕಗಳು ಮತ್ತು ನವೀಕರಿಸಿದ ರಾತ್ರಿ ದೀಪಗಳು ಹಾಗೂ ಇತರ ವೈಶಿಷ್ಟ್ಯಗಳನ್ನು ಹೊಂದಿದೆ. ಏಕ್ ಭಾರತ್ – ಶ್ರೇಷ್ಠ್ ಭಾರತ್ -ವೈವಿಧ್ಯತೆಯಲ್ಲಿ ಏಕತೆ ಎಂಬ ಮನೋಭಾವವನ್ನು ಪ್ರದರ್ಶಿಸಲು ದೇಶದ ಎಲ್ಲಾ ಭಾಗಗಳಿಂದ ಐದು ನೂರು ನೃತ್ಯಗಾರರ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗಿದೆ. ಇದು ಸೆಪ್ಟೆಂಬರ್ 11 ರವರೆಗೆ ಸಂಜೆ 7.00 ರಿಂದ ರಾತ್ರಿ 9.00 ರವರೆಗೆ ಮುಂದುವರಿಯಲಿದೆ. ಇಂಡಿಯಾ ಗೇಟ್‌ನಲ್ಲಿ ನೇತಾಜಿಯವರ ಜೀವನದ ಮೇಲೆ ಬೆಳಕು ಚೆಲ್ಲುವ ಹತ್ತು ನಿಮಿಷಗಳ ವಿಶೇಷ ಡ್ರೋನ್ ಪ್ರದರ್ಶನವಿದೆ. ಸಾಂಸ್ಕೃತಿಕ ಉತ್ಸವ ಮತ್ತು ಡ್ರೋನ್ ಪ್ರದರ್ಶನ ಎರಡಕ್ಕೂ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿರುತ್ತದೆ.












