ಉಡುಪಿ: ಸಹಾಯ ಹಸ್ತ ಲಯನ್ಸ್ ಕ್ಲಬ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಅವಿಭಜಿತ ದ.ಕ ಜಿಲ್ಲೆಯ ಗಾನಕೋಗಿಲೆಗಳ ಪ್ರತಿಭೆ ಅನಾವರಣಗೊಳಿಸುವ ‘ಹಾಡು ನೀ ಹಾಡು’ ಸಂಗೀತ ರಿಯಾಲಿಟಿ ಶೋ ನ ಆಡಿಷನ್ ಸೆ.11 ರಿಂದ ಪ್ರಾರಂಭವಾಗಲಿದ್ದು, ಅಂದು ಬೆಳಿಗ್ಗೆ 8 ಗಂಟೆಗೆ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಹಾಗೂ ಕುಂದಾಪುರದ ಆರ್.ಎನ್ ಶೆಟ್ಟಿ ಪಿಯು ಕಾಲೇಜಿನಲ್ಲಿ ನಡೆಯಲಿದೆ. ಸೆ. 18 ರಂದು ಬೆಳಿಗ್ಗೆ 8 ಗಂಟೆಗೆ ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಶಾರದಾ ವಿದ್ಯಾಲಯ, ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ವಿ ಎಸ್ ಆಚಾರ್ಯ ಸಭಾಂಗಣ ಹಾಗೂ ಪುತ್ತೂರಿನ ಸೈಂಟ್ ವಿಕ್ಟರ್ಸ್ ಗರ್ಲ್ಸ್ ಹೈಸ್ಕೂಲಿನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿ ಈಗಾಗಲೇ ಪ್ರಾರಂಭವಾಗಿದ್ದು ನೋಂದಣಿ ಸಂಪೂರ್ಣ ಉಚಿತವಾಗಿದೆ ಎಂದು ಲಯನ್ಸ್ ಕ್ಲಬ್ ಮಣಿಪಾಲದ ಕೋರ್ ಕಮಿಟಿ ಸದಸ್ಯೆ ಸರಿತಾ ಸಂತೋಷ್ ತಿಳಿಸಿದ್ದಾರೆ.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಸಮರ್ಪಕವಾದ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿ ಆರಂಭವಾಗಿದ್ದು, ಆಡಿಷನ್ ನಡೆಯುವ ಸ್ಥಳದಲ್ಲಿಯೂ ನೋಂದಣಿಗೆ ಅವಕಾಶ ನೀಡಲಾಗಿದೆ. 5 ರಿಂದ 10 ನೇ ತರಗತಿವರೆಗಿನ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಕಾರ್ಯಕ್ರಮವು ವಿ4 ಚಾನೆಲ್ ನಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗಲಿದ್ದು, ಆರು ತಿಂಗಳ ಕಾಲ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನ, ಆಕರ್ಷಕ ಉಡುಗೊರೆಗಳು ಮತ್ತು ಹೆಸರಾಂತ ಗಾಯಕ-ಗಾಯಕಿ, ನಟ-ನಟಿಯರನ್ನು ಭೇಟಿ ಮಾಡುವ ಅವಕಾಶ ಸಿಗಲಿದೆ.
ಆಡಿಷನ್ ನಲ್ಲಿ ಭಾಗವಹಿಸಲು ನಿಯಮಗಳು:
# ಶೃತಿ ಪೆಟ್ಟಿಗೆ, ತಾಳ, ಲಯ, ಕರೋಕೆ ಇತ್ಯಾದಿ ಸಂಗೀತ ಪರಿಕರಗಳನ್ನು ಬಳಸುವಂತಿಲ್ಲ.
# ಭಾವಗೀತೆ, ಜನಪದ ಗೀತೆ, ಸಿನಿಮಾ ಹಾಡು ಇತ್ಯಾದಿ ಯಾವುದೇ ಕನ್ನಡ ಹಾಡನ್ನು ಹಾಡಬಹುದು.
# 5 ರಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಮಾತ್ರ ಅವಕಾಶ.
# ಸ್ಪರ್ಧಾಳುಗಳು ಸ್ಥಳೀಯ(ಅವಿಭಜಿತ ದ.ಕ ಜಿಲ್ಲೆ) ನಿವಾಸಿಗಳಾಗಿರಬೇಕು.
# ಒಂದು ಬಾರಿ ನೋಂದಣಿಗೆ ಮಾತ್ರ ಅವಕಾಶ.
ಹೆಚ್ಚಿನ ಮಾಹಿತಿಗಾಗಿ: 9108560215 ಸಂಪರ್ಕಿಸಿ ಎಂದು ಸರಿತಾ ತಿಳಿಸಿದರು.
ಸಹಾಯ ಹಸ್ತ ಮಣಿಪಾಲ ಲಯನ್ಸ್ ಚಾರಿಟೇಬಲ್ ಫೌಂಡೇಶನ್ ಹಲವಾರು ಸಮಾಜ ಸೇವಾ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ನೆರವಾಗಲು ಉಚಿತ ಸೂರಿನ ವ್ಯವಸ್ಥೆ, ವೃದ್ದರಿಗೆ ಆಹಾರ ಹಾಗೂ ಹಣಕಾಸಿನ ನೆರವು, ಅನಾಥ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಹಸ್ತ, ಹೊರಜಿಲ್ಲೆಗಳ ಕೂಲಿ ಕಾರ್ಮಿಕರ ಮಕ್ಕಳಿಗೆ ಮೂಲ ಸೌಕರ್ಯ ಮತ್ತು ಶಿಕ್ಷಣದ ವ್ಯವಸ್ಥೆ ಮುಂತಾದ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲಿದೆ.
ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಅವಕಾಶ ನೀಡಿ ನುರಿತ ಸಂಗೀತ ತಜ್ಞರಿಂದ ಅವರಿಗೆ ಸರಿಯಾದ ಮಾರ್ಗದರ್ಶನ ಕೊಡಿಸುವ ಹಾಡು ನೀ ಹಾಡು ಕಾರ್ಯಕ್ರಮಕ್ಕೆ ಉಡುಪಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅವಿಭಜಿತ ದ.ಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಪೂರ್ಣ ಸಹಕಾರವಿದ್ದು, ಇದಕ್ಕಾಗಿ ಅವರನ್ನು ಅಭಿನಂದಿಸಿದರು.
ಸುದ್ದಿಗೋಷ್ಠಿಯಲ್ಲಿ ಮಣಿಪಾಲ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಸುರೇಶ್ ಪ್ರಭು, ಸದಸ್ಯರಾದ ಕೃಪಾ ಪ್ರಶೀದ್, ಜಯಂತ್ ಐತಾಳ್, ಸುಹಾಸ್ ಕೌಶಿಕ್, ಗೌತಮ್ ತಲ್ವಾಲ್ಕರ್, ಸೌಜನ್ಯ ವಿ ಉಪಸ್ಥಿತರಿದ್ದರು.