ಮಣಿಪಾಲ: ಸೋಮವಾರದಂದು ಮಣಿಪಾಲದ ಶ್ರೀ ಶಾರದ ಟ್ರೈನಿಂಗ್ ಇನ್ಸ್ಟಿಟ್ಯೂಟಿನಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು.
ಶಿಕ್ಷಕಿ ಚಂದ್ರಕಲಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಕರ ಪಾತ್ರ ಮುಖ್ಯ ನಮ್ಮ ಬದುಕಿನಲ್ಲಿ ಬಂದ ಪ್ರತಿಯೊಂದು ಶಿಕ್ಷಕರನ್ನು ಸ್ಮರಿಸಬೇಕಾದದ್ದು ನಮ್ಮ ಆದ್ಯ ಕರ್ತವ್ಯ. ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ದುಡಿದರೆ ಯಶಸ್ಸು ಖಂಡಿತ ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಡಾ. ವಿಶ್ವನಾಥ್ ಕಾಮತ್ರವರು ಮಾತಾನಾಡಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಉದಾಹರಣೆ ನೀಡಿ, ಅವರು ಕ್ಷಿಪಣಿ ಜನಕ, ಪದ್ಮವಿಭೂಷಣ, ಭಾರತ ರತ್ನ ಹಾಗೂ ರಾಷ್ಟ್ರಪತಿ ಆಗಿದ್ದಕ್ಕಿಂತ ಶಿಕ್ಷಕನಾಗಿದ್ದದ್ದೇ ಶ್ರೇಷ್ಠ ವೃತ್ತಿ ಎಂದುಕೊಂಡಿದ್ದರು. ಇಂತಹ ಮಾನವೀಯ ಸಂಬಂಧಗಳನ್ನು ಬೆಸೆಯುವ ಅಧ್ಯಾಪನ ವೃತ್ತಿ ಸ್ವೀಕರಿಸುತ್ತಿರುವ ಈ ತರಬೇತಿ ಸಂಸ್ಥೆಯ ಎಲ್ಲರೂ ಅಭಿನಂದನಾರ್ಹರು ಎಂದರು.
ಶಿಕ್ಷಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಶಿಕ್ಷಕಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ಪ್ರಾಂಶುಪಾಲೆ ಸುನೀತಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಅಧ್ಯಾಪಕಿ ದಿವ್ಯಾ ಕೋಟ್ಯಾನ್, ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.
ಕು.ಆಯಿಷಾ ಸ್ವಾಗತಿಸಿದರು. ಶ್ರೀಮತಿ ಸುಮಿತ್ರಾ ನಿರೂಪಿಸಿದರು.