ಅಯಮ್ ಸೆಮಾನಿ ಇಂಡೋನೇಷ್ಯಾದಲ್ಲಿ ಕಾಣಸಿಗುವ ಅಪರೂಪದ ಮತ್ತು ತುಲನಾತ್ಮಕವಾಗಿ ಆಧುನಿಕ ಕೋಳಿ ತಳಿಯಾಗಿದೆ. ಇವು ಪ್ರಬಲವಾದ ಜೀನ್ ಅನ್ನು ಹೊಂದಿದ್ದು ಅದು ಹೈಪರ್ಪಿಗ್ಮೆಂಟೇಶನ್ (ಫೈಬ್ರೊಮೆಲನೋಸಿಸ್) ಅನ್ನು ಉಂಟುಮಾಡುತ್ತದೆ, ಇದು ಕೋಳಿಯನ್ನು ಸಂಪೂರ್ಣವಾಗಿ ಕಪ್ಪು ಮಾಡುತ್ತದೆ. ಎಷ್ಟೆಂದರೆ ಇವುಗಳ ಗರಿಗಳು, ಕೊಕ್ಕು, ಮಾಂಸ, ಮೂಳೆಗಳು ಮತ್ತು ಆಂತರಿಕ ಅಂಗಗಳು ಸೇರಿದಂತೆ ಎಲ್ಲವೂ ಕೃಷ್ಣಮಯಂ!
ಇಂಡೋನೇಷಿಯನ್ ಭಾಷೆಯಲ್ಲಿ ಅಯಮ್ ಎಂದರೆ “ಕೋಳಿ”, ಸೆಮಾನಿ ಎಂದರೆ (ಮೂಲತಃ ಜಾವಾನೀಸ್ ಪದ) “ಸಂಪೂರ್ಣವಾಗಿ ಕಪ್ಪು” (ಮೂಳೆಗಳವರೆಗೆ). ಒಂದು ಹಕ್ಕಿಯು ನಿಜವಾದ ಆಯಮ್ ಸೆಮಾನಿಯಾಗಲು ಫೈಬ್ರೊಮೆಲನೋಸಿಸ್ ಜೀನ್‌ನ ಎರಡು ಪ್ರತಿಗಳನ್ನು ಹೊಂದಿರಬೇಕು. ಇವುಗಳು ದೇಶೀಯ ಕೋಳಿಗಳು ಮತ್ತು ಹಸಿರು ಕಾಡುಕೋಳಿಗಳ ನಡುವಿನ ಅಡ್ಡತಳಿಗಳಾಗಿರಬೇಕು ಎಂದು ಭಾವಿಸಲಾಗಿದೆ.
ನಮ್ಮಂತೆಯೆ ಬಾಲಿ ದ್ವೀಪದಲ್ಲಿಯೂ ಕೋಳಿ ಕಾಳಗಗಳು ನಡೆಯುತ್ತವೆ. ಸೆಮಾನಿಯು ಕೋಳಿ ಕಾಳಗಕ್ಕೆ ಹೇಳಿ ಮಾಡಿಸಿದಂತಿದೆ, ಏಕೆಂದರೆ ಇತರ ಕೋಳಿಗಳಿಗೆ ಹೋಲಿಸಿದರೆ ಅವುಗಳ ತೊಡೆಗಳು ಹೆಚ್ಚು ಸ್ನಾಯುಗಳನ್ನು ಹೊಂದಿರುತ್ತವೆ, ಇದು ಅವು ಹೆಚ್ಚು ವೇಗವಾಗಿ ಆಕ್ರಮಣ ಮಾಡಲು ಸಹಕಾರಿಯಾಗಿರುತ್ತದೆ. ಈ ಶುದ್ಧ ಇಂಡೋನೇಷಿಯನ್ ತಳಿಯು ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಹುಟ್ಟಿಕೊಂಡಿತು ಮತ್ತು ಬಹುಶಃ 12 ನೇ ಶತಮಾನದಿಂದಲೂ ಧಾರ್ಮಿಕ ಮತ್ತು ಅತೀಂದ್ರಿಯ ಉದ್ದೇಶಗಳಿಗಾಗಿ ಇದನ್ನು ಬಳಸಲಾಗುತ್ತಿದೆ ಎನ್ನುತ್ತಾರೆ. ಸಾಂಪ್ರದಾಯಿಕ ಔಷಧ ತಯಾರಿಕೆಯಲ್ಲಿ ಕೋಳಿಯ ರಕ್ತ ಮತ್ತು ಇತರ ಭಾಗಗಳನ್ನು ಬಳಸುತ್ತಾರೆ. ಇವು ಮಾಂತ್ರಿಕ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ ಮತ್ತು ಜೀವಂತ ಮತ್ತು ಆತ್ಮ ಪ್ರಪಂಚದ ನಡುವೆ ಸಂವಹನವನ್ನು ಸುಗಮಗೊಳಿಸುತ್ತದೆ ಎಂದೂ ನಂಬಿಕೆ ಇದೆ. ದೇವತಾ ಪೂಜೆಗಳಲ್ಲಿ ಇದನ್ನು ಬಲಿ ಕೊಡುವ ನಿದರ್ಶನಗಳೂ ಇವೆ. ಇಂಡೋನೇಷ್ಯಾದಲ್ಲಿ ಇದರ ಮಾಂಸವನ್ನು ಬಹಳ ಕಡಿಮೆ ತಿನ್ನಲಾಗುತ್ತದೆ.
ಇದು ಸಾಕಷ್ಟು ಅಪರೂಪದ ಪಕ್ಷಿಯಾಗಿರುವುದರಿಂದ ಇದನ್ನು ಪಡೆಯುವುದು ತುಂಬಾ ಕಷ್ಟ, “ಫೀನಿಕ್ಸ್ ನ್ಯೂ ಟೈಮ್ಸ್” ಪ್ರಕಾರ, ಕಪ್ಪು ಇಂಡೋನೇಷಿಯಾದ ಅಯಾಮ್ ಸೆಮಾನಿ ಕೋಳಿಗಳು ಒಂದು ಜೋಡಿಗೆ 5,000 ಡಾಲರ್ ಬೆಲೆಬಾಳುತ್ತವೆ, ಮತ್ತಿದು ತುಂಬಾ ದುಬಾರಿಯಾಗಿದೆ. ಇದರ ದುಬಾರಿ ಬೆಲೆಯಿಂದಾಗಿ ಇದನ್ನು ಲಾಂಬೋರ್ಗಿನಿ ಚಿಕನ್ ಎಂದೂ ಹೇಳಲಾಗುತ್ತದೆ!
ಅಯಮ್ ಸೆಮಾನಿ ಬಹಳ ಕಡಿಮೆ ಮೊಟ್ಟೆ ಇಡುತ್ತದೆ. ಸರಾಸರಿಯಾಗಿ ವರ್ಷಕ್ಕೆ ಸುಮಾರು 80 ಮೊಟ್ಟೆಗಳನ್ನು ಇಡುತ್ತವೆ. ಇವುಗಳು 20-30 ಮೊಟ್ಟೆಗಳನ್ನು ಇಡುತ್ತವೆ ಮತ್ತು ನಂತರ ಮೊಟ್ಟೆ ಇಡುವುದನ್ನು ನಿಲ್ಲಿಸುತ್ತವೆ. ಸುಮಾರು 6 ತಿಂಗಳ ಬಳಿಕ ಮತ್ತೆ ಮೊಟ್ಟೆ ಇಡಲು ಶುರು ಹಚ್ಚುತ್ತವೆ. ಮೊಟ್ಟೆಗಳು ಕೆನೆ-ಬಣ್ಣದ ಸ್ವಲ್ಪ ಗುಲಾಬಿ ಛಾಯೆಯದ್ದಾಗಿರುತ್ತವೆ.
ಕೃಪೆ: ಗಾರ್ಡಿಯನ್