ಬೆಳ್ತಂಗಡಿ: ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್ ಕಾರ್ಡ್ ಅಭಿಯಾನಕ್ಕೆ ಚಾಲನೆ

ಬೆಳ್ತಂಗಡಿ : “ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್ ಕಾರ್ಡ್” ಅಭಿಯಾನವನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಡಿ ಪ್ರದೇಶವಾದ ಬಂಜಾರು ಮಲೆಯ ತುಳುನಾಡಿನ ಮೂಲ ಜನಾಂಗದ ಆದಿವಾಸಿಗಳು ವಾಸಿಸುವಂತಹ ಪ್ರದೇಶದಿಂದ ಚಾಲನೆ ನೀಡಲಾಯಿತು.

ಸೆಪ್ಟೆಂಬರ್ 1ರಂದು ಪ್ರಾರಂಭವಾದ ಈ ಅಭಿಯಾನ ಗುರುವಾರದಿಂದ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದ್ದು ಸುಮಾರು 1 ಲಕ್ಷಕ್ಕೂ ಮೀರಿದ ಪೋಸ್ಟ್ ಕಾರ್ಡ್ ಗಳನ್ನು ತುಳು ಭಾಷೆಯ ಮಾನ್ಯತೆಗಾಗಿ ದೇಶದ ಪ್ರಧಾನಿಯವರಿಗೆ ಕಳುಹಿಸುವ ಗುರಿಯನ್ನು ಹೊಂದಿದೆ. ಈ ಅಭಿಯಾನಕ್ಕೆ ಎಲ್ಲಾ ಸಂಘ ಸಂಸ್ಥೆಗಳ ಬೆಂಬಲವನ್ನು ಕೋರಲಾಗಿದೆ.

ಮೂಲ ಜನಾಂಗದ ಪ್ರದೇಶವಾದ ಬಂಜಾರು ಮಲೆಯಿಂದ ಸಾಂಕೇತಿಕವಾಗಿ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಬಂಜಾರು ಮಲೆಯ ಮೂಲಜನಾಂಗದವರು ತುಳು ಭಾಷೆಯ ಮಾನ್ಯತೆಗಾಗಿ ನಡೆಯುವ ಪೋಸ್ಟ್ ಕಾರ್ಡ್ ಅಭಿಯಾನಕ್ಕೆ ತಮ್ಮ ಬೆಂಬಲವಿದೆ ಎಂದು ತಿಳಿಸಿದ್ದಾರೆ. ನಮ್ಮ ಮಾತೃ ಭಾಷೆಯಾದ ತುಳುವಿಗೆ ಸರಕಾರದಿಂದ ಮಾನ್ಯತೆ ದೊರಕಬೇಕು ಎಂದು ತಿಳಿಸಿ ಪೋಸ್ಟ್ ಕಾರ್ಡ್ ಬರೆಯುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಳ್ತಂಗಡಿಯಲ್ಲಿ ತುಳುವೆರೆ ಪಕ್ಷದಿಂದ ಸಂಪೂರ್ಣ ಬೆಂಬಲ ದೊರೆತಿದ್ದು, ಕಾರ್ಯಕ್ರಮದಲ್ಲಿ ತುಳುವೆರ್ ಕುಡ್ಲ ಸಂಘಟನೆಯ ಅಧ್ಯಕ್ಷ ಪ್ರತೀಕ್ ಯು. ಪೂಜಾರಿ, ಉಪಾಧ್ಯಕ್ಷ ಸಂತೋಷ್ ಮತ್ತು ಸದಸ್ಯ ಪ್ರಜ್ವಲ್ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಪೂಜಾ ಶೆಟ್ಟಿ, ಸದಸ್ಯೆ ನಿಕ್ಷಿತಾ, ತುಳುನಾಡು ವಾರ್ತೆ ವಾರ ಪತ್ರಿಕೆಯ ಸಂಪಾದಕ ಪುನೀತ್ ಮತ್ತು ತುಳುವೆರ್ ಪಕ್ಷದ ಅಧ್ಯಕ್ಷ ಶೈಲೇಶ್ ಆರ್. ಜೆ. ಸಮಾಜ ಸೇವಕ ಪ್ರವೀಣ್ ಮುಂತಾದವರು ಭಾಗಿಯಾಗಿದ್ದರು.

ತುಳುವೆರೆ ಪಕ್ಷದಿಂದ ಅಭಿಯಾನಕ್ಕೆ ಚಾಲನೆ

ತುಳುವೆರೆ ಪಕ್ಷವು ಕಳೆದ 10 ವರ್ಷಗಳಿಂದ ತುಳು ಭಾಷೆ, ಸಂಸ್ಕೃತಿ ಉಳಿವಿಗೆ ಅನೇಕ ವಿದಧ ಹೋರಾಟಗಳನ್ನು ಮಾಡುತ್ತಿದ್ದು, ತುಳುವೆರೆ ಪಕ್ಷಕ್ಕೆ ಈ ಅಭಿಯಾನದಿಂದ ಬಹಳ ಸಂತೋಷವಾಗಿದ್ದು, ತುಳುವೆರೆ ಪಕ್ಷದಿಂದ ಈ ಅಭಿಯಾನಕ್ಕೆ ಸಂಪೂರ್ಣ ಬೆಂಬಲವಿದೆ. ತುಳುವೆರೆ ಪಕ್ಷದ ಕಡೆಯಿಂದ 10 ಸಾವಿರ ಕಾರ್ಡುಗಳನ್ನು ಬೆಳ್ತಂಗಡಿ ವಲಯದಲ್ಲಿ ಬರೆಯಿಸಿ ಪ್ರಧಾನಿ ಮೋದಿಯವರಿಗೆ ಕಳುಹಿಸುವ ಮೂಲಕ ನಮ್ಮ ಪಕ್ಷದಿಂದ ಬೆಂಬಲವನ್ನು ನೀಡಲಾಗುವುದು ಎಂದು ತುಳುವೆರೆ ಪಕ್ಷದ ಅಧ್ಯಕ್ಷ ಶೈಲೇಶ್ ಆರ್.ಜೆ. ತಿಳಿಸಿದ್ದಾರೆ.