ಬ್ರಹ್ಮಾವರ: ಕುಕ್ಕೆಹಳ್ಳಿಯ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿಯ ಸ್ಥಳಾಂತರಿತ ಶಾಖೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 4 ಭಾನುವಾರದಂದು ಬ್ರಹ್ಮಾವರ ಮುಖ್ಯರಸ್ತೆಯ ಮಧುವನ್ ಕಾಂಪ್ಲೆಕ್ಸ್ ನಲ್ಲಿ ಜರುಗಿತು.
ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, 21 ವರ್ಷಗಳ ಹಿಂದೆ ಸ್ಥಾಪನೆಯಾದ ಸಂಸ್ಥೆ ಇಂದು ಪ್ರೌಢಾವಸ್ಥೆಗೆ ತಲುಪಿದ್ದು, ಸಂಸ್ಥೆಯ ಬೆಳವಣಿಗೆಗೆ ಅಭಿನಂದನೆ. ಸಂಸ್ಥೆಯು ಕೇವಲ ಲಾಭ ಗಳಿಕೆಯ ಉದ್ದೇಶ ಮಾತ್ರದಿಂದಲ್ಲದೆ ಸಮಾಜ ಸೇವೆಯ ವಿವಿಧ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದೆ. ಸಂಸ್ಥೆಯಲ್ಲಿ ಪ್ರಾಮಾಣಿಕ ಮತ್ತು ನಿಷ್ಠಾವಂತ ಸಿಬ್ಬಂದಿಗಳಿರುವುದರಿಂದ ಅಭಿವೃದ್ದಿ ಸಾಧ್ಯವಾಯಿತು. ವಾಣಿಜ್ಯ ಬ್ಯಾಂಕ್ ಗಳ ಉಗಮ ಸ್ಥಾನವೆಂದು ಕರೆಯಲಾಗುವ ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬ್ಯಾಂಕ್ ಗಳ ಜನರಿಂದ ದೂರವಾಗಿರುವುದು ವಿಷಾದನೀಯ. ಆದರೂ ಸಹಕಾರಿ ಬ್ಯಾಂಕ್ ಗಳು ಜನರಿಗೆ ಹತ್ತಿರವಾಗಿರುವುದು ಒಳ್ಳೆಯ ವಿಚಾರ. ಸಹಕಾರ ಕ್ಷೇತ್ರದ ಪರಸ್ಪರ ಸಹಕಾರ ತತ್ವ, ನಂಬಿಕೆ, ಭದ್ರತೆ ಮತ್ತು ಕ್ಲಪ್ತ ಸಮಯಕ್ಕೆ ಒದಗಿಸುವ ಸೇವೆಗಳಿಂದಾಗಿ ಸಹಕಾರಿ ಬ್ಯಾಂಕ್ ಗಳು ಬೆಳೆಯುತ್ತಿವೆ.
ಜಿಲ್ಲೆಯಲ್ಲಿ 700 ಸಹಕಾರಿ ಬ್ಯಾಂಕ್ ಗಳಿದ್ದು, 4,000 ಕೋಟಿ ಠೇವಣಿ ಇದ್ದು, ರಾಜ್ಯದಲ್ಲಿ ಒಟ್ಟು 48,000 ಸಹಕಾರಿ ಬ್ಯಾಂಕ್ ಗಳಿವೆ. ಸಮಾಜದ ಎಲ್ಲಾ ವರ್ಗದ ಜನರಿಗೆ ಸೇವೆ ನೀಡುವ ಸಹಕಾರಿ ಬ್ಯಾಂಕ್ ಗಳು ಇನ್ನಷ್ಟು ವಿಶ್ವಾಸರ್ಹತೆಯನ್ನು ಬೆಳೆಸಿಕೊಂಡು ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಕೆ ರಘುಪತಿ ಭಟ್ ಮಾತನಾಡಿ, ಸೊಸೈಟಿಯ ನೂತನ ಶಾಖೆಯು ಕುಕ್ಕೆಹಳ್ಳಿಯಿಂದ ಬ್ರಹ್ಮಾವರದಂತದ ಬೆಳೆಯುತ್ತಿರುವ ನಗರಕ್ಕೆ ಸ್ಥಳಾಂತರಗೊಂಡದಕ್ಕೆ ಶುಭಾಶಯಗಳನ್ನು ಸಲ್ಲಿಸಿದರು. ಕೇವಲ ಇಪ್ಪತ್ತು ವರ್ಷಗಳಲ್ಲಿ 93 ಕೋಟಿ ರೂಗಳ ಠೇವಣಿ ಹೊಂದಿರುವ ಸಂಸ್ಥೆಯು ಮುಂದಿನ ದಿನಗಳಲ್ಲಿ 100 ಕೋಟಿ ರೂಗಳ ಠೇವಣಿ ಹೊಂದುವಂತಾಗಲಿ ಎಂದ ಅವರು ಸಂಸ್ಥೆಯ ವತಿಯಿಂದ ನೀಡಲಾಗುತ್ತಿರುವ ಬಡ್ಡಿ ರಹಿತ ಸೋಲಾರ್ ನೀಡುವ ವಿನೂತನ ಯೋಜನೆಯನ್ನು ಶ್ಲಾಘಿಸಿದರು. ಈಗೆಲ್ಲಾ ಸೋಲಾರ್ ಅಳವಡಿಕೆ ಕಡ್ಡಾಯವಾಗಿದ್ದು, ಮನೆ ಅಥವಾ ನಿವೇಶನ ಕಟ್ಟುವವರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಸರಕಾರವೂ ಕೂಡಾ ಸೋಲಾರ್ ಅಳವಡಿಕೆಗೆ ಉತ್ತೇಜನ ನೀಡುತ್ತಿದ್ದು, ಇದರಿಂದ ಸರಕಾರ, ಸಮಾಜ ಮತ್ತು ಪರಿಸರಕ್ಕೂ ಅನುಕೂಲವಾಗಲಿದೆ ಎಂದು ಹೇಳಿದರು.
ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಶೋಕ್ ಕಾಮತ್ ಕೆ. ಅಧ್ಯಕ್ಷತೆ ವಹಿಸಿದ್ದರು.
ಮಣಿಪಾಲ ಆರ್.ಎಸ್.ಬಿ ಸಂಘದ ಅಧ್ಯಕ್ಷ ಗೋಕುಲ್ ದಾಸ್ ನಾಯಕ್, ಉದ್ಯಮಿ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಗಣೇಶ್ ಕಿಣಿ ಬೆಳ್ವೆ, ಬ್ರಹ್ಮಾವರ ಸಿ ಎ ಬ್ಯಾಂಕ್ ನಿರ್ದೇಶಕ ರಾಜೇಶ್ ಶೆಟ್ಟಿ ಬಿರ್ತಿ, ಚಾಂತಾರು ಗ್ರಾ.ಪ ಅಧ್ಯಕ್ಷೆ ಶ್ರೀಮತಿ ಬೇಬಿ ರಮೇಶ್ ಪೂಜಾರಿ, ಮಧುವನ್ ಕಾಂಪ್ಲೆಕ್ಸ್ ಮಾಲಕ ಶ್ಯಾಮ್ ಪೂಜಾರಿ ಭಾಗವಹಿಸಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ನಿತ್ಯಾನಂದ ನಾಯಕ್, ಶಾಖಾ ವ್ಯವಸ್ಥಾಪಕ ಪ್ರಕಾಶ್ ನಾಯಕ್, ಮತ್ತು ಶಾಖಾ ಸಲಹಾ ಸಮಿತಿಯ ಸದಸ್ಯರು ಹಾಜರಿದ್ದರು.
ಮನಸ್ವಿ ಮತ್ತು ಪರ್ಣಿಕಾ ಪ್ರಾರ್ಥಿಸಿದರು. ಪಾಂಡುರಂಗ ಕಾಮತ್ ಸ್ವಾಗತಿಸಿದರು. ನರಸಿಂಹ ನಾಯಕ್ ಪ್ರಸ್ತಾವಿಸಿದರು. ದಿನೇಶ್ ಪ್ರಭು ಹೀರೇಬೆಟ್ಟು ನಿರೂಪಿಸಿದರು. ಗಣಪತಿ ಪ್ರಭು ಕುಕ್ಕೆ ಹಳ್ಳಿ ವಂದಿಸಿದರು.