ಮಣಿಪಾಲ: ಹಗಲು ರಾತ್ರಿ ಎನ್ನದೆ ದುಡಿಯುವ, ಯಾವುದೇ ಸಮಯದ ಆಪತ್ತಿನಲ್ಲಿಯೂ ಸಹಾಯಕ್ಕೆ ಬರುವ ಆಟೋ ರಿಕ್ಷಾ ಚಾಲಕರು ಆಪದ್ಭಾಂದವರಿದ್ದಂತೆ. ಹೊತ್ತಲ್ಲದ ಹೊತ್ತಿನಲ್ಲಿಯೂ ನಮ್ಮ ಸಹಾಯಕ್ಕಾಗುವ ಆಟೋ ರಿಕ್ಷಾ ಚಾಲಕರಿಗೂ ಆರ್ಥಿಕ ರಕ್ಷಣೆ ಬೇಕು. ಈ ನಿಟ್ಟಿನಲ್ಲಿ ಆಟೋ ರಿಕ್ಷಾ ನಿರ್ವಾಹಕರ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯು ಉತ್ತಮ ಕಾರ್ಯಗಳನ್ನು ಮಾಡುತ್ತಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.
ಅವರು ಭಾನುವಾರ ಮಣಿಪಾಲದ ಬಾಳಿಗಾ ಹೋಟೇಲ್ ಬಳಿ ಆಟೋ ನಿರ್ವಾಹಕರ ಸಹಕಾರಿ ಸಂಘದ ನೂತನ ಹವಾನಿಯಂತ್ರಿತ ಸ್ವಂತ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ದೂರದೃಷ್ಟಿಯಿಂದ ಕೆಲಸ ಮಾಡಿದರೆ ಯಾವ ರೀತಿ ಬೆಳವಣಿಗೆ ಹೊಂದಬಹುದೆನ್ನುವುದನ್ನು ಆಟೋ ನಿರ್ವಾಹಕರ ಸಂಘದಿಂದ ಕಲಿಯಬಹುದು. ದಿ. ಆಸ್ಕರ್ ಫೆರ್ನಾಂಡಿಸ್ ರವರು ದೂರದೃಷ್ಟಿಯುಳ್ಳ ನಾಯಕ. ಅವರ ದೂರದೃಷ್ಟಿಯ ಫಲವೇ ಈ ಸೊಸೈಟಿ. ಇದು ಕೇವಲ ಚಾಲಕ-ನಿರ್ವಾಹಕರಿಗೆ ಮಾತ್ರವಲ್ಲ, ಅವರ ಇಡೀ ಕುಟುಂಬವನ್ನು ನಿರ್ವಹಣೆ ಮಾಡುವಂತಹ ಸಂಸ್ಥೆ. ಈ ಸಂಸ್ಥೆಯಿಂದ ಅನೇಕ ಉತ್ತಮ ಕಾರ್ಯಗಳಾಗಿವೆ, ಮುಂದೆಯೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವೃತ್ತಿಗನುಗುಣವಾದ ಸಂಸ್ಥೆಯಿದ್ದಾಗ, ವೃತ್ತಿಯಲ್ಲಿ ನಿರತರಾಗಿರುವವರ ಆರ್ಥಿಕ ರಕ್ಷಣೆ ಸಾಧ್ಯ. ಅದನ್ನು ಈ ಸಂಸ್ಥೆ ನೆರವೇರಿಸುತ್ತಿದೆ.
ಮಣಿಪಾಲದ ಬೆಳವಣಿಗೆಯಲ್ಲಿ 80 ಬಡಗುಬೆಟ್ಟಿನ ಜನರ ಸಹಕಾರವಿದ್ದು, ಈ ಪ್ರದೇಶದಲ್ಲಿ ತನ್ನ ಸ್ವಂತ ಕಟ್ಟಡವನ್ನು ಹೊಂದಿರುವ ಶಾಖೆಯು ಎಲ್ಲರ ಸಹಕಾರದಿಂದ ಇನ್ನಷ್ಟು ಬೆಳೆದು, ಕರ್ನಾಟಕದಲ್ಲೇ ಮಾದರಿ ಶಾಖೆಯಾಗಿ ಬೆಳೆದು ಉನ್ನತಿಯನ್ನು ಕಾಣಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ದಿನೇಶ್ ಪುತ್ರನ್ ಮಾತನಾಡಿ, 25 ವರ್ಷಗಳಿಂದ ವ್ಯವಹಾರ ನಡೆಸುತ್ತಿರುವ ಸಂಸ್ಥೆಯು ಕಟಪಾಡಿ ಮತ್ತು ಮಣಿಪಾಲದಲ್ಲಿ ಸ್ವಂತ ಕಟ್ಟಡವನ್ನು ಹೊಂದಿದ್ದು, ಸಂಸ್ಥೆಯ ಪ್ರಧಾನ ಕಚೇರಿಯ ಸ್ವಂತ ಕಟ್ಟಡವನ್ನು ಆಸ್ಕರ್ ಫೆರ್ನಾಂಡಿಸ್ ಕನಸಿನಂತೆಯೆ ಅದು ಸ್ಥಾಪನೆಯಾದ ಬ್ರಹ್ಮಗಿರಿಯಲ್ಲಿಯೇ ತೆರೆಯಬೇಕು ಎನ್ನುವ ಉದ್ದೇಶವಿದೆ. ಸಂಘದಲ್ಲಿ 63 ಕೋಟಿ ರೂ ಠೇವಣಿ ಇದ್ದು ಮುಂದಿನ ದಿನಗಳಲ್ಲಿ ಇದನ್ನು 100 ಕೋಟಿ ರೂ ಗೆ ಏರಿಸುವ ಉದ್ದೇಶ ಹೊಂದಿದ್ದೇವೆ. ಎಲ್ಲರ ಸಹಕಾರ ದೊರೆತಲ್ಲಿ ಸಂಸ್ಥೆಯ ಲಾಭವನ್ನು 1 ಕೋಟಿ ರೂ.ಗೇರಿಸುವ ಗುರಿ ಇದೆ. ಸಂಸ್ಥೆಯ ವತಿಯಿಂದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ, ಸದಸ್ಯರ ವೈದ್ಯಕೀಯ ವೆಚ್ಚಗಳನ್ನು ಭರಿಸಲಾಗುತ್ತಿದ್ದು ಮುಂದಿನ ಮಹಾಸಭೆಯಲ್ಲಿ ರಿಕ್ಷಾ ಚಾಲಕರ ಕಲ್ಯಾಣ ನಿಧಿಯನ್ನು ಸ್ಥಾಪಿಸಲಾಗುತ್ತದೆ ಎಂದ ಅವರು ಸಂಸ್ಥೆಯ ಏಳಿಗೆಗಾಗಿ ದುಡಿದ ಎಲ್ಲ ಸಿಬ್ಬಂದಿಗಳ ಸೇವೆಗೆ ಅಭಿನಂದನೆ ಸಲ್ಲಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ವ್ಯವಸ್ಥಾಪಕ ಶ್ರೀಧರ್ ದೇವಾಡಿಗ, 1990 ರಲ್ಲಿ ದಿ.ವಂಗತ ಆಸ್ಕರ್ ಫೆರ್ನಾಂಡಿಸ್ ರವರ ಕನಸಿನ ಕೂಸಾಗಿ ಜನ್ಮ ತಳೆದ ಸಂಸ್ಥೆಯು ಹಲವಾರು ಕಷ್ಟ ನಷ್ಟಗಳನ್ನು ಅನುಭವಿಸಿ, ಎಲ್ಲರ ಪ್ರಯತ್ನ ಮತ್ತು ಸಹಕಾರದಿಂದ ಬೆಳೆದು ನಿಂತಿದೆ. 1995 ರಲ್ಲಿ ಸಂಸ್ಥೆಯನ್ನು ಪುನಶ್ಚೇತನಗೊಳಿಸಿ ಬ್ಯಾಂಕಿಗ್ ವ್ಯವಸ್ಥೆಗೆ ನಾಂದಿ ಹಾಡಲಾಯಿತು. ಅಂದು 3 ಲಕ್ಷ ರೂ ನಷ್ಟ ಅನುಭವಿಸಿದ್ದ ಸಂಸ್ಥೆಯು ಇಂದು 63 ಕೋಟಿ ರೂ ಠೇವಣಿ ಹೊಂದಿದ್ದು, 43 ಕೋಟಿ ರೂ ಸಾಲ ನೀಡಿದೆ. ಸಂಸ್ಥೆಯು 36 ಲಕ್ಷ ರೂ ಗಳ ಲಾಭ ದಾಖಲಿಸಿದ್ದು, ಕೊರೋನಾ ಮಹಾಮಾರಿ ಬರುವ ಮುಂಚೆ ಸದಸ್ಯರಿಗೆ 18% ಡೆವಿಡೆಂಟ್ ನೀಡಿರುತ್ತದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲರ ಸಹಕಾರ ದೊರೆತಲ್ಲಿ ಎರಡು ವರ್ಷಗಳಲ್ಲಿ ಪ್ರಧಾನ ಕಚೇರಿಗೂ ಸ್ವಂತ ಕಟ್ಟಡ ಹೊಂದುವ ಭರವಸೆ ಇದೆ ಎಂದರು.
ಶಾಸಕ ರಘುಪತಿ ಭಟ್ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿದರು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು.
ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಸ್ಥಾಪಕ ಉಪಾಧ್ಯಕ್ಷ ನರಸಿಂಹ ಮೂರ್ತಿ, ಸ್ಥಾಪಕ ನಿರ್ದೇಶಕರ ಮಣಿಪಾಲ ಕೇದಾರನಾಥ ಕಿಶೋರ್ , ಉಪಾಧ್ಯಕ್ಷ ವಿಠಲ ಪೂಜಾರಿ, ಪ್ರಧಾನ ವ್ಯವಸ್ಥಾಪಕ
ಮನೋಹರ ದೇವಾಡಿಗ, ಶಾಖಾ ವ್ಯವಸ್ಥಾಪಕ ಶೇಖರ ಆಚಾರ್ಯ, ಆಡಳಿತ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಶ್ರೀಮತಿ ವಿಜಯಲಕ್ಷ್ಮಿ ಪ್ರಾರ್ಥಿಸಿದರು. ಪ್ರಧಾನ ವ್ಯವಸ್ಥಾಪಕ ಮನೋಹರ್ ದೇವಾಡಿಗ ಸ್ವಾಗತಿಸಿದರು. ನಿರ್ದೇಶಕ ಕಾರ್ತಿಕ್ ದೇವಾಡಿಗ ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.