ಕಿನ್ನಿಮೂಲ್ಕಿ: ಬಡ ಮೀನುಗಾರರ ತಾತ್ಕಾಲಿಕ ಶೆಡ್ ಏಕಾಏಕಿ ತೆರವು; ನಗರಸಭೆ ನಡೆಗೆ ಸಾರ್ವಜನಿಕರಿಂದ ಆಕ್ರೋಶ

ಉಡುಪಿ: ಉಡುಪಿ ನಗರಸಭೆಯ ಅಮಾನವೀಯ ನಡವಳಿಕೆಯಿಂದಾಗಿ ಕಿನ್ನಿಮೂಲ್ಕಿ ಪರಿಸರದ ಮೀನುಗಾರರು ಬವಣೆ ಅನುಭವಿಸುವಂತಾಗಿದೆ. ಅಕ್ರಮ ನಿರ್ಮಾಣದ ನೆಪದಲ್ಲಿ ಕಿನ್ನಿಮೂಲ್ಕಿ ಪರಿಸರದಲ್ಲಿರುವ ಮೀನುಗಾರರ ತಾತ್ಕಾಲಿಕ ಶೆಡ್ ಅನ್ನು ಏಕಾಏಕಿ ತೆರವುಗೊಳಿಸಿದ್ದು, ನಗರಸಭೆಯ ಈ ನಡೆಗೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ.

ಉಡುಪಿಯ ಸ್ವಾಗತ ಗೋಪುರದ ದ್ವಾರದ ಬಳಿ ಬಡ ಮೀನುಗಾರರು ನಾಲ್ಕು ದಶಕಗಳಿಂದ ಮೀನು ಮಾರಾಟ ನಡೆಸುತ್ತಿದ್ದು, ಮಳೆ-ಬಿಸಿಲಿನಿಂದ ರಕ್ಷಣೆಗಾಗಿ ಶೆಡ್ ನಿರ್ಮಿಸಿಕೊಡುವಂತೆ ನಗರಸಭೆಗೆ ಅಹವಾಲು ಮಾಡಿದ್ದರೂ ಕ್ಯಾರೇ ಅನ್ನದ ಅಧಿಕಾರಿಗಳ ನಡೆಗೆ ಬೇಸತ್ತು, ಸ್ಥಳೀಯ ನಗರಸಭಾ ಸದಸ್ಯೆ ತನ್ನ ವೈಯಕ್ತಿಕ ಗೌರವ ಧನದಿಂದ ಮೀನುಗಾರರಿಗಾಗಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ಕೊಟ್ಟಿದ್ದರು. ಕೆಲದಿನಗಳಿಂದ ಈ ಶೆಡ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇದೀಗ ಏಕಾಏಕಿ ನೋಟೀಸು ಕೂಡ ನೀಡದೆ ನಗರಸಭೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಅಕ್ರಮ ನಿರ್ಮಾಣ ಎಂಬ ನೆಪವೊಡ್ಡಿ ಶೆಡ್ ಅನ್ನು ಕೆಡವಿದ್ದಾರೆ.

ನಗರಸಭಾ ಸದಸ್ಯೆ ಅಮೃತ ಕೃಷ್ಣಮೂರ್ತಿ ಆಚಾರ್ಯ ಹಾಗೂ ಕೃಷ್ಣಮೂರ್ತಿ ಆಚಾರ್ಯ ಸ್ಥಳಕ್ಕಾಗಮಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು ಈ ಬಗ್ಗೆ ಅಧಿಕಾರಿಗಳಲ್ಲಿ ಪ್ರಶ್ನಿಸಿದಾಗ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವೀಸ್ ರೋಡಿನಲ್ಲಿ ಶೆಡ್ ನಿರ್ಮಾಣ ಮಾಡಿರುವುದರಿಂದ ತೆರವುಗೊಳಿಸಲಾಗಿದೆ ಎಂದಿದ್ದಾರೆ.

ಶೆಡ್ ಅನ್ನು ಸಂಪೂರ್ಣ ಧ್ವಂಸ ಮಾಡಿರುವ ನಗರಸಭೆಯ ಈ ಅಮಾನವೀಯ ನಡೆಗೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಉಡುಪಿ ನಗರದಲ್ಲಿ ಎಷ್ಟೊಂದು ಅಕ್ರಮ ಕಟ್ಟಡಗಳಿದ್ದರೂ ಶ್ರೀಮಂತರೆನ್ನುವ ಕಾರಣಕ್ಕೆ ಅವರ ಕಟ್ಟಡಗಳನ್ನು ಕೆಡವಲು ಹಿಂದೆ ಮುಂದೆ ನೋಡುವ ನಗರಸಭೆ ಬಡ ಮೀನುಗಾರರ ಶೆಡ್ ಅನ್ನು ಏಕಾಏಕಿ ತೆರವುಗೊಳಿದೆ. ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯ ಎನ್ನುವ ಮಲತಾಯಿ ಧೋರಣೆ ಉಡುಪಿ ನಗರಸಭೆಯಿಂದ ವ್ಯಕ್ತವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.