ತುಮಕೂರು: ಗುರುವಾರ ಬೆಳಗ್ಗೆ ಜಿಲ್ಲೆಯಲ್ಲಿ ಲಾರಿ ಮತ್ತು ಟೆಂಪೋ ಟ್ರಾಕ್ಸ್ ಕ್ರೂಸರ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 13 ಜನರು ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ 200 ಕಿಮೀ ದೂರದಲ್ಲಿರುವ ಬಾಳೇನಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿದೆ.
ಪೊಲೀಸರು ಸಂಗ್ರಹಿಸಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಬಲಿಯಾದವರಲ್ಲಿ ಹೆಚ್ಚಿನವರು ರಾಯಚೂರು ಜಿಲ್ಲೆಯ ಕಾರ್ಮಿಕರಾಗಿದ್ದಾರೆ. ಟ್ರಾಕ್ಸ್ ಕ್ರೂಸರ್ನಲ್ಲಿ ಸುಮಾರು 24 ಜನರು ಪ್ರಯಾಣಿಸುತ್ತಿದ್ದರು ಎಂದು ಮೂಲಗಳು ತಿಳಿಸಿದ್ದು, ಮೃತರಲ್ಲಿ ಚಾಲಕ ಕೃಷ್ಣಪ್ಪ ಕೂಡ ಸೇರಿದ್ದಾರೆ.
ಅಪಘಾತ ಸಂಭವಿಸಿದಾಗ ಹೆಚ್ಚಿನ ಬಲಿಪಶುಗಳು ಮಲಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ, ಅಪಘಾತದ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ನಡೆದ ಅಪಘಾತ ಹೃದಯ ವಿದ್ರಾವಕ. ಅಪಘಾತದಲ್ಲಿ ಜೀವ ಕಳೆದು ಕೊಂಡವರಿಗೆ ಸಂತಾಪಗಳು. ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥನೆ. ಮೃತರ ಕುಟುಂಬದವರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ ಎಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ಮಂತ್ರಿ ಬೊಮ್ಮಾಯಿ, ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಜನರು ಸಾವಿಗೀಡಾಗಿ ಹಲವರು ಗಾಯಗೊಂಡಿರುವ ವಿಷಯ ತಿಳಿದು ತೀವ್ರ ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಘಟನೆ ದುರದೃಷ್ಟಕರವಾಗಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದಿದ್ದಾರೆ.












