ತಾಳ್ಮೆ ಸಂವೇದನಾಶೀಲತೆಯಿಂದ ಉತ್ಕೃಷ್ಟ ಚಿತ್ರಗಳನ್ನು ಸೆರೆಹಿಡಿಯುವ ಛಾಯಾಗ್ರಾಹರ ಕಾರ್ಯ ಮೆಚ್ಚುವಂಥದ್ದು-ರೊ। ಬಾಲಕೃಷ್ಣ ಮದ್ದೋಡಿ

ಉಡುಪಿ: ಛಾಯಾಚಿತ್ರದಲ್ಲಿನ ನೈಪುಣ್ಯ,ವೈಜ್ಞಾನಿಕತೆ ಮತ್ತು ತಾಂತ್ರಿಕತೆ ಹಾಗೂ ಭಾವನಾತ್ಮಕ ಸಂವೇದನಾಶೀಲತೆ ಇವೆಲ್ಲವನ್ನೂ ನಾವು ಗುರುತಿಸಿಕೊಂಡಾಗ ಮಾತ್ರ ಛಾಯಾಗ್ರಹಣ ಎನ್ನುವುದು ಎಷ್ಟು ವಿಶಿಷ್ಟವಾದದ್ದು ಎಂಬ ಅರಿವು ನಮಗಾಗುತ್ತದೆ. ಹಾಗಾಗಿ ಛಾಯಾಗ್ರಹಣ ವೃತ್ತಿ ಮಾಡುವ ಎಲ್ಲ ಛಾಯಾಗ್ರಾಹಕರು ಅಭಿನಂದನಾರ್ಹರು ಎಂದು ಉಡುಪಿ ರೋಟರಿ ರೋಯಲ್ ನ ಅಧ್ಯಕ್ಷ ರೊ। ಬಾಲಕೃಷ್ಣ ಮದ್ದೋಡಿ ಅಭಿಪ್ರಾಯಪಟ್ಟರು.

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ, ರೋಟರಿ ಉಡುಪಿ ರೋಯಲ್ ಸಂಯುಕ್ತವಾಗಿ ಆಯೋಜಿಸಿದ್ದ ವಿಶ್ವಛಾಯಾಗ್ರಹಣ ದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಒಂದು ಕ್ಷಣದ ಸುಂದರ ಛಾಯಾಚಿತ್ರಕ್ಕಾಗಿ ಗಂಟೆಗಟ್ಟಲೆ, ದಿನಗಟ್ಟಲೆ, ವರ್ಷಗಟ್ಟಲೆ ತಾಳ್ಮೆಯಿಂದ ಕಾದು ಅದನ್ನು ವಿಶಿಷ್ಟ ರೀತಿಯಲ್ಲಿ ನಮಗೆ ಒಪ್ಪಿಸುವ ಛಾಯಾಗ್ರಾಹಕರ ಕಾರ್ಯ ಮೆಚ್ಚುವಂತಹುದು ಎಂದು ಅವರು ಪ್ರಶಂಸಿಸಿದರು.

ಇನ್ನೋರ್ವ ಅತಿಥಿ ಜಿಲ್ಲಾಧ್ಯಕ್ಷ ಆನಂದ ಎನ್ ಕುಂಪಲ ಮಾತನಾಡಿ ನಮ್ಮ ಛಾಯಾಗ್ರಹಣ ಕ್ಷೇತ್ರದಲ್ಲಿ ನಮ್ಮತನವನ್ನು ಕಂಡುಕೊಂಡು, ಸಾಮಾಜಿಕವಾಗಿ ಕೂಡಾ ನಾವು ಮುಂದೆ ಬರಬೇಕೆಂದರು.

ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಹಫೀಜ್ ರೆಹಮಾನ್, ಸುವರ್ಣ ಕಾರ್ಯದರ್ಶಿ, ಪ್ರವೀಣ್ ಕೊರೆಯ ಉಪಸ್ಥಿತರಿದ್ದರು.

ಹಿರಿಯ ಛಾಯಾಗ್ರಾಹಕ ಜಗನ್ನಾಥ ಶೆಟ್ಟಿ, ಹಾಗೂ ಚಂದ್ರಶೇಖರ್ ಅಂಬಲಪಾಡಿ ಇವರಿಗೆ ಛಾಯಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ನಡೆದ ಛಾಯಾಚಿತ್ರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ದೇಶದ ಗಡಿ ಕಾಯುವ ಯೋಧ ಬಾಲರಾಜ್ ರವರನ್ನು ಅಭಿನಂದಿಸಲಾಯಿತು. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಉಡುಪಿ ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಸ್ವಾಗತಿಸಿದರು. ಪ್ರಸ್ತಾವನೆಯ ರೂಪದಲ್ಲಿ ಪೂರ್ಣಿಮಾ ಜನಾರ್ದನ್ ಕವನ ವಾಚಿಸಿದರು. ಕೋಶಾಧ್ಯಕ್ಷ ದಿವಾಕರ ಹಿರಿಯಡ್ಕ ವಂದಿಸಿದರು. ರಾಘವೇಂದ್ರ ಶೇರಿಗಾರ್ನಿ ನಿರೂಪಿಸಿದರು.