ಕಾರ್ಕಳ: ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರನ್ನು ರಾಜಕೀಯ ವ್ಯಕ್ತಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡು ಅವಹೇಳನ ಮಾಡುತ್ತಿರುವುದು ಖಂಡನೀಯ ಎಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸದಸ್ಯ ರಮೇಶ್ ಕಲ್ಲೊಟ್ಟೆ ಹೇಳಿದರು.
ಕಾರ್ಕಳದ ಹಿಂದೂ ಜಾಗಣ ವೇದಿಕೆ ಹಾಗೂ ಹಿಂದೂ ಯುವ ವಾಹಿನಿ ವತಿಯಿಂದ ಕಾರ್ಕಳ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾವರ್ಕರ್ ಅವಹೇಳನ ಮಾಡಿದ ಸಿದ್ದರಾಮಯ್ಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ರಮೇಶ್ ಕಲ್ಲೊಟ್ಟೆ, ನಮಗೆ ಸ್ವಾತಂತ್ರ್ಯ ಕೇವಲ ಶಾಂತಿಯಿಂದ ಸಿಕ್ಕಿಲ್ಲ ಬದಲಿಗೆ ಸಾವಿರಾರು ಹೋರಾಟಗಾರರ ಬಲಿದಾನದಿಂದ ಸಿಕ್ಕಿದೆ. ಆದರೆ ಕ್ರಾಂತಿಯಿಂದ ಸ್ವಾತಂತ್ರ್ಯವನ್ನು ಪಡೆದವರ ಹೆಸರನ್ನು ಮರೆಮಾಚಿ ಇತಿಹಾಸವನ್ನು ತಿರುಚಿ ಬರೆಯಲಾಗಿದೆ.
ಸುಳ್ಳು ಇತಿಹಾಸವನ್ನು ನಂಬುವ ಕಾಲ ಇದಲ್ಲ, ಪ್ರಜ್ಞಾವಂತ ನಾಗರಿಕರಿಗೆ ಸತ್ಯ ಏನು ಎನ್ನುವುದು ಅರಿವಾಗಿದೆ ಎಂದರು. ಸ್ವಾತಂತ್ರ್ಯಕ್ಕಾಗಿ ಕರಿನೀರಿನ ಶಿಕ್ಷೆ ಹಾಗೂ 15 ವರ್ಷ ಕಠಿಣ ಜೈಲು ಶಿಕ್ಷೆ ಅನುಭವಿಸಿದ ವೀರ ಸಾವರ್ಕರ್ ಅವರನ್ನು ದೇಶದ್ರೋಹಿ ಎಂದು ನಿಂದಿಸಲಾಗುತ್ತಿದೆ ಅಲ್ಲದೇ ಸನಾತನ ಸಂಸ್ಕೃತಿಯ ಭಾರತವನ್ನು ಒಡೆಯುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಿಂದೂ ಯುವ ವಾಹಿನಿ ಸಂಯೋಜಕ್ ರಿಕೇಶ್ ಪಾಲನ್, ಜಿಲ್ಲಾ ಹಿಂದೂ ಜಾಗರಣ ವೇದಿಕೆ ಸಂಯೋಜಕ ಉಮೇಶ್ ಸೂಡ, ತಾಲೂಕು ಹಿಂದೂ ಜಾಗರಣ ವೇದಿಕೆ ಗುರು ಪ್ರಸಾದ್ ನಾರಾವಿ, ಹಿಂದೂ ಯುವವಾಹಿನಿ ತಾಲೂಕು ಸಂಯೋಜಕ ಸುಜಿತ್ ಕುಂದರ್, ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಜಾಗರಣ ವೇದಿಕೆ ಮುಖಂಡ ರತ್ನಾಕರ್ ಅಮೀನ್, ಎಬಿವಿಪಿ ಸಂಚಾಲಕ ಮನೀಷ್ ಮುಂತಾದವರು ಉಪಸ್ಥಿತರಿದ್ದರು.