ಉಡುಪಿ: ಭಗವದ್ಗೀತೆಯ ಮೂಲಕ ಶ್ರೀಕೃಷ್ಣ ಸಾರಿರುವ ಸಂದೇಶಗಳು ಸರ್ವಕಾಲಕ್ಕೂ ವಿಶ್ವಕ್ಕೆ ಅನ್ವಯವಾಗಲಿವೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು.
ಅವರು ಶುಕ್ರವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ಮತ್ತು ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಸಹಕಾರದೊಂದಿಗೆ ಆಯೋಜಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾವಿರಾರು ವರ್ಷಗಳ ಹಿಂದೆ ಶ್ರೀ ಕೃಷ್ಣ ಭೋದಿಸಿದ ಭಗವದ್ಗೀತೆಯಲ್ಲಿ ಮನುಷ್ಯನ ಸುಗಮ ಜೀವನ ವಿಧಾನ ಆಡಳಿತ ವ್ಯವಸ್ಥೆ ಸಂದೇಶಗಳು ವಿಶ್ವದ ಎಲ್ಲಾ ದೇಶಗಳ ಜನತೆಗೆ ಹಾಗೂ ಎಲ್ಲಾ ಕ್ಷೇತ್ರಗಳಿಗೂ ಅನ್ವಯವಾಗಲಿದ್ದು ವಿದೇಶಿಯರೂ ಶ್ರೀ ಕೃಷ್ಣನ ತತ್ವ ಸಂದೇಶಗಳ ಅಕರ್ಷಣೆಗೆ ಒಳಗಾಗಿ ಅವುಗಳನ್ನು ಅಭ್ಯಸಿಸಲು ಭಾರತಕ್ಕೆ ಆಗಮಿಸುತ್ತಿದ್ದಾರೆ. ಜಗತ್ತಿನ ಅನೇಕ ಮಹಾನ್ ವ್ಯಕ್ತಿಗಳ ಉನ್ನತ ಸಾಧನೆಗೆ ಗೀತೆಯಲ್ಲಿನ ಸಂದೇಶಗಳು ಕಾರಣವಾಗಿವೆ. ಉಡುಪಿಯಲ್ಲಿ 800 ವರ್ಷಗಳ ಹಿಂದೆ ಶ್ರೀ ಕೃಷ್ಣನನ್ನು ಮಧ್ವಾಚಾರ್ಯರು ಪ್ರತಿಷ್ಠಾಪಿಸಿ ಮಾಧ್ವ ತತ್ವಗಳನ್ನು ಇಡೀ ಜಗತ್ತಿಗೆ ಸಾರಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಕು.ಅಕ್ಷಯಾ ಗೋಖಲೆ ಮಾತನಾಡಿ, ಧರ್ಮದ ರಕ್ಷಣೆಗಾಗಿ ಅಧರ್ಮದ ವಿರುದ್ದ ಹೋರಾಡಲು ಅವತರಿಸಿದ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ತಿಳಿಸಿದ ಶ್ರಧ್ದೆಯಿಂದ ಅಧ್ಯಯನ ಮಾಡಿದರೆ ಜ್ಞಾನ ದೊರೆಯುತ್ತದೆ ಪ್ರಯತ್ನ ಪಟ್ಟರೆ ಉತ್ತಮ ಫಲ ದೊರೆಯುತ್ತದೆ ಎಂಬ ಸಂದೇಶವನ್ನು ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ಸಾಧನೆಗಳನ್ನು ಮಾಡಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಯಾವುದೇ ಪರಿಸ್ಥಿತಿಯಲ್ಲಿ ತನ್ನಿಂದ ಈ ಕಾರ್ಯ ಮಾಡಲು ಅಸಾಧ್ಯ ಎಂದು ಹತಾಶನಾಗದೇ ನನ್ನಿಂದ ಇದು ಸಾಧ್ಯ ಎಂಬ ಧ್ಯೇಯದಿಂದ ಮುನ್ನೆಡೆದರೆ ಯಶಸ್ಸು ದೊರೆಯುತ್ತದೆ ಎಂಬ ಸಂದೇಶ ಎಲ್ಲರಿಗೂ ಅನ್ವಯವಾಗಲಿದ್ದು ಶ್ರೀ ಕೃಷ್ಣನ ಸಂದೇಶಗಳಿಂದ ಬದುಕಿನಲ್ಲಿ ಸ್ಪೂರ್ತಿ, ಪ್ರೇರಣೆ ದೊರೆಯಲಿದೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾಪು ಶಾಸಕ ಲಾಲಾಜಿ.ಆರ್.ಮೆಂಡನ್, ದಿ ಮೈಸೂರು ಎಲೆಕ್ಟಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿ.ಪಂ. ಸಿಇಓ ಪ್ರಸನ್ನ ಹೆಚ್,ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚೀಂದ್ರ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ , ಜಿಲ್ಲಾ ಯಾದವ ಗೊಲ್ಲ ಸಮಾಜ ಸಂಘಧ ಅಧ್ಯಕ್ಷ ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು. ಕೃಷ್ಣ ಜಯಂತಿ ಅಂಗವಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆ, ನೃತ್ಯ ಸ್ಪರ್ಧೆ ಮತ್ತಿತರ ಕಾರ್ಯಕ್ರಮಗಳು ನಡೆದವು.